

ಬಡವರ, ನ್ಯಾಯದ ಪರ ನಿಲ್ಲುವವನೇ ನಿಜವಾದ ರೆಡ್ಡಿ: ಶಾಸಕ ನಾರಾ ಭರತ್ ರೆಡ್ಡಿ
20th January 2025
ಬಳ್ಳಾರಿ, ಜ.20: ಬಡವ, ಬಲ್ಲಿದರ ನೆರವಿಗೆ ನಿಂತು, ನ್ಯಾಯದ ರಕ್ಷಣೆ ಮಾಡುವವನೇ ನಿಜವಾದ ರೆಡ್ಡಿ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ರೆಡ್ಡಿ ಜನ ಸಂಘಂ ವತಿಯಿಂದ ಏರ್ಪಡಿಸಿದ್ದ ಯೋಗಿ ವೇಮನರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಜನಸೇವೆಗೆ ಬರಲು ನಿಮ್ಮೆಲ್ಲರ ಆಶೀರ್ವಾದ ಕಾರಣ, ನಿಮ್ಮಿಂದಾಗಿ ನಾನು ಶಾಸಕನಾಗಿರುವೆ ಎಂದರು.
ನನ್ನ ಕುಟುಂಬದ ಹಿರಿಯರು ಸಾಕಷ್ಟು ಕಷ್ಟ ಅನುಭವಿಸಿ, ಬದುಕು ಕಟ್ಟಿಕೊಳ್ಳುತ್ತ ಜನಸೇವೆ ಮಾಡಿದ್ದಾರೆ ಎಂದರು.
ಸಮಾಜ ಸೇವೆಯ ಬಗ್ಗೆ ಜಯಂತಿಯ ಸಂದರ್ಭದಲ್ಲಿ ಮಾತನಾಡುತ್ತೇವೆ, ಆದರೆ ದಿನ ಬೆಳಾಗುವುದರಲ್ಲಿ ನಮ್ಮ ಅಭಿಪ್ರಾಯ ಬದಲಾಗಿರುತ್ತದೆ ಎಂದ ಅವರು, ನನ್ನ ಕುಟುಂಬ, ನನ್ನ ಆಸ್ತಿ, ನನ್ನ ಪಕ್ಷ ಎಂಬ ಸ್ವಾರ್ಥ ಜಾಗೃತಗೊಳ್ಳುತ್ತದೆ, ಆದರೆ ಹೀಗಾಗಬಾರದು ಎಂದರು.
ಸಮಾಜದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಕೆಲಸ ಮಾಡೋಣ, ರೆಡ್ಡಿ ಸಮಾಜದ ಹಲವು ಮುಖಂಡರು ನಾವು ಬೇರೆ ಬೇರೆ ಪಕ್ಷಗಳಲ್ಲಿ ಇದ್ದರೂ ರೆಡ್ಡಿ ಸಮಾಜದ ಏಳಿಗೆಗಾಗಿ ಶ್ರಮಿಸಬೇಕಿದೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಸಮಾಜದ ವಿಷಯ ಬಂದಾಗ ಎಲ್ಲ ಭೇದ ಮರೆತು ಒಂದಾಗಬೇಕು ಎಂದರು.
ರೆಡ್ಡಿ ಸಮುದಾಯದಲ್ಲಿ ಬಡವರೇ ಇಲ್ಲ ಎಂಬುದು ಸುಳ್ಳು, ನಮ್ಮಲ್ಲೂ ಬಡವರಿದ್ದಾರೆ, ಅಂಥವರ ಕಲ್ಯಾಣಕ್ಕಾಗಿ ಶ್ರಮಿಸೋಣ, ವಿಶೇಷವಾಗಿ ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡೋಣ ಎಂದರು.
ನಮ್ಮ ಸಮುದಾಯದ ಯುವ ಜನಾಂಗದ ಅಭಿವೃದ್ಧಿಗಾಗಿ ನಮ್ಮ ಹಿರಿಯರು ಹಲವು ಕನಸು ಕಂಡಿದ್ದಾರೆ, ಅವುಗಳನ್ನು ಸಾಕಾರಗೊಳಿಸೋಣ ಎಂದ ಅವರು, ರೆಡ್ಡಿ ಎಂದಾಕ್ಷಣ ಮೀಸೆ ತಿರುವಿ, ಜಗಳಕ್ಕೆ ಹೋಗುವುದಲ್ಲ, ಬಡವರ ರಕ್ಷಣೆ ಮಾಡಬೇಕು, ನಮ್ಮ ಸಮುದಾಯದ ಜನರು ನ್ಯಾಯದ ಪರ ನಿಲ್ಲಬೇಕು, ಕಷ್ಟ ಹೇಳಿಕೊಂಡು ಬರುವ ಜನರಿಗೆ ನೆರವು ನೀಡಬೇಕು ಎಂದರು.
ಬಳ್ಳಾರಿ ರೆಡ್ಡಿ ಜನಸಂಘಂ ವತಿಯಿಂದ ನಿರ್ಮಾಣ ಹಂತದಲ್ಲಿರುವ ರೆಡ್ಡಿ ಭವನದ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಂಡು ಅದ್ಧೂರಿಯಾಗಿ ಉದ್ಘಾಟಿಸಲಾಗುವುದು, ನಾನು ಕಳೆದ ವರ್ಷ ಕೊಟ್ಟ ಮಾತಿನಂತೆ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡುವೆ ಎಂದರು.
ರೆಡ್ಡಿ ಜನ ಸಂಘಂ ಜಿಲ್ಲಾಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ, ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಜಿಲ್ಲಾ ಸರ್ಜನ್ ಡಾ.ಬಸರೆಡ್ಡಿ, ನಾರಾ ಶೈಲಜಾ ಪ್ರತಾಪ್ ರೆಡ್ಡಿ, ಪ್ರಭು ರೆಡ್ಡಿ ಮೊದಲಾದವರು ಹಾಜರಿದ್ದರು.