1st February 2025
ಚಡಚಣ : ಪಟ್ಟಣದ ಆರಾಧ್ಯ ದೈವ ಶ್ರೀ ಸಂಗಮೇಶ್ವರ ದೇವರ ಜಾತ್ರೆಯು ಜ. ೨೯ ರಿಂದ ಅದ್ದೂರಿಯಾಗಿ ಆರಂಭಗೊAಡಿದ್ದು, ಜಾತ್ರೆಯ ೨ನೇ ದಿನವಾದ ಗುರುವಾರ ಸಾಯಂಕಾಲ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಹಾಗೂ ನಂದಿ ಧ್ವಜದ ಮೆರವಣಿಗೆಯು ವಿವಿಧ ಕಲಾ ತಂಡಗಳ ನೃತ್ಯ ಪ್ರದರ್ಶನದ ಮೂಲಕ ೯.೨೦ ಗಂಟೆಗೆ ಶ್ರೀ ಸಂಗಮೇಶ್ವರ ದೇವಸ್ಥಾನ ತಲುಪಿತು.
ನಂತರ ೯.೨೦ ಗಂಟೆಗೆ ಜಾತ್ರೆಯ ನಿಮಿತ್ಯ ದೇವಸ್ಥಾನದ ಪಕ್ಕದಲ್ಲಿರುವ ಎತ್ತರದ ವಿಶಾಲವಾದ ಮೈದಾನದಲ್ಲಿ ಶ್ರೀ ದತ್ತ ಶುರ‍್ಸ್ ಹಾವಿನಾಳ ಕಾರ್ಖಾನೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಆಕರ್ಷಕ ಚಿತ್ರ-ವಿಚಿತ್ರವಾದ ಮದ್ದು ಸುಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಾತ್ರೆಯ ಅಂಗವಾಗಿ ಏರ್ಪಡಿಸಲಾಗಿದ್ದ ಮದ್ದು ಸುಡುವ ಕಾರ್ಯಕ್ರಮದಲ್ಲಿ ಪಟಾಕಿಗಳು ಹೊರಹೊಮ್ಮಿಸಿದ ಶಬ್ದ, ಮೂಡಿಸಿದ ಬೆಳಕಿನ ಚಿತ್ತಾರ ಸೆರಿದ್ದ ಜನಸಾಗರವನ್ನು ಖುಷಿಪಡಿಸುವಲ್ಲಿ ಯಶಸ್ವಿಯಾಯಿತು. ವಿಧ ವಿಧವಾದ ಬಣ್ಣಗಳ ಬಾಣ ಬಿರುಸು ಆಕಾಶಕ್ಕೆ ನೆಗೆದು ಚಿತ್ತಾರ ಮೂಡಿಸುತ್ತಿದ್ದಂತೆಯೇ ನೆರೆದಿದ್ದ ಜನರ ಆನಂದಕ್ಕೆ ಮಿತಿಯೇ ಇರಲಿಲ್ಲ. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ತದೇಕ ಚಿತ್ತರಾಗಿ ಬಾಣ ಬಿರುಸು ವೀಕ್ಷಿಸಿ ಕೆಲ ಹೊತ್ತು ಆನಂದದಲ್ಲಿ ಮೈಮರೆತರು.
ಮದ್ದು ಸುಡುವ ಕಾರ್ಯಕ್ರಮದ ವೈಭವವನ್ನು ಕಣ್ಣು ತುಂಬಿಕೊಳ್ಳಲು ಪಟ್ಟಣದ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಜನರು ರಾತ್ರಿ ೮ ಗಂಟೆಗೆ ದೇವಸ್ಥಾನದ ಎದುರಿನಲ್ಲಿರುವ ಬೋರಿ ಹಳ್ಳದ ವಿಶಾಲವಾದ ಮೈದಾನದಲ್ಲಿ ತಮ್ಮ ಆಸನಗಳನ್ನು ಭದ್ರಪಡಿಸಿಕೊಂಡಿದ್ದರು. ಬೆಂಕಿಯಲ್ಲಿ ಅರಳಿದ ನಾನಾ ರೀತಿಯ ಚಕ್ರಗಳು, ತ್ರಿಶೂಲ, ದೇವಾಲಯ, ಕಾರಂಜಿ, ಸ್ವಾಗತ ಕಮಾನು, ಶ್ರೀ ದತ್ತ ಸಕ್ಕರೆ ಕಾರ್ಖಾನೆಯ ನಾಮಫಲಕ, ಜಲಪಾತ, ಬೆಳಕಿನ ಗಿಡ, ಪಟಾಕಿಯ ವಿಶಿಷ್ಟ ಚಿತ್ತಾರಗಳು ಕಣ್ಮನ ಸೆಳೆದವು. ಇವೆಲ್ಲ ಚಿತ್ತಾಕರ್ಷಕ ದೃಶ್ಯಗಳೊಟ್ಟಿಗೆ ಮಧ್ಯದಲ್ಲಿ ಆಕಾಶದೆತ್ತರಕ್ಕೆ ಚಿಮ್ಮುತ್ತಿದ್ದ ಟಬ್, ಟುಬ್ ಎಂದು ಕಿವಿಗಡಚ್ಚಿಕ್ಕುವ ದೊಡ್ಡ ಪಟಾಕಿಗಳಂತೂ ದೊಡ್ಡ ಸದ್ದು ಮಾಡುತ್ತಿದ್ದವು. ಇವುಗಳ ಸದ್ದು ಕೇಳಿಸಿಕೊಳ್ಳಲಿಕ್ಕಾಗದವರು ತಮ್ಮ ಎರಡೂ ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿ ಹಿಡಿಯುವ ಪ್ರಯತ್ನ ಮಾಡಿದರು.
ಯಾವುದೇ ಅಹಿತಕರ ಘಟನೆ ಸಂಭವಿಸದAತೆ ಮುಂಜಾಗ್ರತಾ ಕ್ರಮವಾಗಿ ಚಡಚಣ ಸಿ.ಪಿ.ಐ. ಅವರ ನೇತೃತ್ವದಲ್ಲಿ ಚಡಚಣ, ಪೊಲೀಸರಿಂದ ಬಿಗಿ ಬಂದೋಬಸ್ತ ಏರ್ಪಡಿಸಲಾಗಿತ್ತು.