Jamakhandi News
News

ಸಾಧನೆಯ ಹಾದಿ ಸುಲಭವಲ್ಲ: ಉಪನ್ಯಾಸಕಿ ವಿಮಲಾ

16th August 2024

ಜಮಖಂಡಿ: ಸಾಧನೆಯ ಹಾದಿ ಸುಲಭವಲ್ಲ. ಆತ್ಮವಿಶ್ವಾಸ, ಸದೃಢವಾದ ಸಂಕಲ್ಪ, ಸತತ ಪ್ರಯತ್ನ, ಕಳೆಗುಂದದ ಉತ್ಸಾಹ, ಕಠಿಣ ಪರಿಶ್ರಮ, ತ್ಯಾಗದ ಮನೋಭಾವ, ನಿಸ್ವಾರ್ಥ ಸೇವೆ ಇವೆಲ್ಲವುಗಳ ಆಗರವೆ ಸಾಧನೆ ಎಂದು ಸರ್ಕಾರಿ ಪಿ.ಬಿ.ಪ.ಪೂ ಕಾಲೇಜಿನ ಉಪನ್ಯಾಸಕಿ ವಿಮಲಾ ಬೊಮ್ಮನಹಳ್ಳಿ ಹೇಳಿದರು.


ಶ್ರೀವೀರೇಶ್ವರ ಪ್ರಕಾಶನ, ಸಾಹಿತ್ಯ ಸೌರಭ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಇಲ್ಲಿನ ಸಾಹಿತ್ಯ ಸೌರಭ ವೇದಿಕೆಯಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ವಿವಿಧ ಸಾಧಕರ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಾಧನೆ ಎನ್ನುವುದು ಒಂದು ದಿನದ ಕಾರ್ಯವಲ್ಲ. ಎಲೆಮರೆಯ ಕಾಯಿಯಂತೆ ಹಾಗೂ ತನ್ನನ್ನೆ ಸುಟ್ಟುಕೊಂಡು ಇತರರಿಗೆ ಬೆಳಕನ್ನು ನೀಡುವ ಮೇಣಬತ್ತಿಯಂತೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ವಿಶೇಷ ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದರು.


ನಿವೃತ್ತ ಪ್ರಾಚಾರ್ಯ ಡಾ.ಸಂಗಮೇಶ ಮಟೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಧಕರನ್ನು ಗುರುತಿಸಿ ಗೌರವಿಸದವರು ಯಾರೂ ದೊಡ್ಡವರೆನಿಸಿಕೊಳ್ಳುವುದಿಲ್ಲ. ತ್ಯಾಗ ಮತ್ತು ಸೇವೆ ಸಾಧಕರ ಅವಳಿ ಆದರ್ಶಗಳಾಗಿವೆ. ಸಾಧಕರು ಸತ್ತ ಮೇಲೆ ಮುಕ್ತರಾಗುವುದಿಲ್ಲ. ಬದಲಾಗಿ ಜೀವಂತ ಇರುವಾಗಲೇ ಮುಕ್ತರಾಗಿರುತ್ತಾರೆ ಎಂದರು.


ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಉಪಾಧ್ಯಕ್ಷ ಚಿತ್ತರಂಜನ ನಾಂದ್ರೇಕರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡಿದರು. ಸಾಹಿತಿ ರುದ್ರಗೌಡ ಪಾಟೀಲ ಅವರು ವಿರಚಿತ ‘ಅವಲೋಕನ’ ಕೃತಿಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.


ವಿಶೇಷ ಸಾಧಕರಾದ ಹಿರಿಯ ಪತ್ರಕರ್ತ ಡಾ.ಟಿ.ಪಿ. ಗಿರಡ್ಡಿ, ಸಾಹಿತಿ ರುದ್ರಗೌಡ ಪಾಟೀಲ, ಸಾಹಿತಿ ಬಾಹುಬಲಿ ಬಿರಾದಾರಪಾಟೀಲ, ಪ್ರಗತಿಪರ ರೈತ ಸೋಮನಾಥ ಪಾಟೀಲ, ಸಾಹಿತಿ ಪ್ರವೀಣ ಕುಲಕರ್ಣಿ, ಕೃಷಿ ಲೇಖಕ ಬಸವರಾಜ ಗಿರಗಾಂವಿ, ಶುಶ್ರೂಷಕ ಜೆ.ಡಿ. ಧನ್ನೂರ, ಸಾಹಿತಿ ಡಾ.ಶ್ರೀದೇವಿ ಸುವರ್ಣಖಂಡಿ ಅವರುಗಳನ್ನು ಪ್ರಮಾಣ ಪತ್ರ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಕಲಾವಿದ ಬಿ.ಎನ್. ಅಸ್ಕಿ ಪ್ರಾರ್ಥನೆ ಗೀತೆ ಹಾಡಿದರು. ಪ್ರೊ.ರಾಜಶೇಖರ ಹೊಸಟ್ಟಿ ಸ್ವಾಗತಿಸಿದರು. ಶಿಕ್ಷಕ ರಮೇಶ ದೇಸಾಯಿ, ಉಪನ್ಯಾಸಕ ಡಾ.ಲಿಂಗಾನಂದ ಗವಿಮಠ ನಿರೂಪಿಸಿದರು. ನಿವೃತ್ತ ಶಿಕ್ಷಕ ಸುರೇಂದ್ರ ಯಲ್ಲಟ್ಟಿ ವಂದಿಸಿದರು.