
13th February 2025
ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ
ಕರ್ನಾಟಕ ಸರ್ಕಾರ ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಾಲಯ ಹಾಗೂ ಪ್ರಾದೇಶಿಕ ಎನ್ಎಸ್ಎಸ್ ನಿರ್ದೇಶನಾಲಯ ಶೇಷಾದ್ರಿಪುರಂ, ಬೆಂಗಳೂರು ಹಾಗೂ ಪ್ರಥಮ ದರ್ಜೆ ಕಾಲೇಜು, ಯಲಹಂಕ ಇವರ ಸಹಯೋಗದಲ್ಲಿ ದಿನಾಂಕ 11/02/2025 ರಿಂದ 17/02/2025 ರವಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಭಾವೈಕ್ಯದ ಶಿಬಿರಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಿಂದ ಆಯ್ಕೆಯಾದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಎನ್ಎಸ್ಎಸ್ ಸ್ವಯಂಸೇವಕ ತುಕಾರಾಮ ರಮೇಶ ಗೌಡರ ಇವರಿಗೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಎಂ . ಜಿ. ಹೆಗಡೆ ಹಾಗೂ ಎನ್ ಎಸ್ ಎಸ್ ಅಧಿಕಾರಿಗಳಾದ ಲಖತ್ ಅತ್ತಾರ ಮತ್ತು ರೇಣುಕಾ ಜುಂಜವಾಡಕರ ಹಾಗೂ ಸಿಬ್ಬಂದಿವರ್ಗ ಅಭಿನಂದಿಸಿದರು.
13th February 2025
ಸಂವಿಧಾನವೆ ಪರಮೋಚ್ಚ ಕಾನೂನು : ನ್ಯಾಯವಾದಿ ಮೋಹನ ಮಾವಿನಕಟ್ಟಿ
ಪ್ರಾಣಿಗಳ ಬದುಕಿಗೆ ಸೃಷ್ಟಿಯೇ ನಿಯಮ, ಮನುಷ್ಯನ ಬದುಕಿಗೆ ಸಂವಿಧಾನವೇ ನಿಯಮ. ಧರ್ಮ ಗ್ರಂಥಗಳಲ್ಲಿರುವ ಕಾನೂನುಗಳಿಗಿಂತಲೂ ಸಂವಿಧಾನವೇ ನಮಗೆ ಪರಮೋಚ್ಚ ಕಾನೂನು ಎಂದು ಬೆಳಗಾವಿಯ ಹಿರಿಯ ನ್ಯಾಯವಾದಿ ಮೋಹನ ಮಾವಿನಕಟ್ಟಿ ಅಭಿಪ್ರಾಯಪಟ್ಟರು.
ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್ಎಸ್ಎಸ್ ಘಟಕಗಳ ಸಯುಕ್ತ ಆಶ್ರಯದಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ ಮತ್ತು ಸಂವಿಧಾನ ಅನುಷ್ಠಾನದ ವಜ್ರಮಹೋತ್ಸವದ ಕುರಿತು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಭಾರತದ ಸಂವಿಧಾನವು ಜಗತ್ತಿನ ಅತಿ ದೀರ್ಘವಾದ ಮತ್ತು ಲಿಖಿತ ಸಂವಿಧಾನವಾಗಿದೆ. ಪ್ರಪಂಚದ ಎಲ್ಲಾ ಸಂವಿಧಾನಗಳಲ್ಲಿನ ಅತ್ಯುತ್ತಮವಾದ ಅಂಶಗಳನ್ನು ಆಯ್ದುಕೊಂಡು ಈ ನೆಲದ ಸಂಸ್ಕೃತಿಯ ಆಶಯದ ಮೇಲೆ ರಚಿತವಾಯಿತು. ವ್ಯಕ್ತಿಯ ಸಂಪೂರ್ಣ ಬದಲಾವಣೆ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ, ಧ್ವನಿ ಇಲ್ಲದವರ ಧ್ವನಿಯಾಗಿ ಸಂವಿಧಾನ ಮಹತ್ತರ ಕಾರ್ಯ ನಿರ್ವಹಿಸುತ್ತಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಭಾವನೆಗಳನ್ನು ಜನಮಾನಸದಲ್ಲಿ ತುಂಬಿ ತನ್ಮೂಲಕ ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗಲು ಸಂವಿಧಾನವು ಅಡಿಪಾಯವಾಗಿದೆ.
ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳು ರಾಜ್ಯನೀತಿ ನಿರ್ದೇಶಕ ತತ್ವಗಳ ಮೂಲಕ ಭಾರತವನ್ನು ಕಲ್ಯಾಣ ರಾಜ್ಯ ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ.ಜಿ ಹೆಗಡೆ ಮಾತನಾಡಿ ಸಂವಿಧಾನ ಅನುಷ್ಠಾನದ ವಜ್ರ ಮಹೋತ್ಸವದ ಈ ಸಂದರ್ಭದಲ್ಲಿ ಸಂವಿಧಾನದ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಕೂಡ ಇಂದು ಸಂವಿಧಾನವನ್ನೇ ಜಪಿಸುತ್ತಿವೆ. ಸಂವಿಧಾನದ ಮಹತ್ವದ ಅರಿವು ಹಿಂದೆಂದಿಗಿಂತಲೂ ಇಂದು ಎಲ್ಲಾ ಪಕ್ಷಗಳಲ್ಲಿ ಬಂದಿವೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಪಾರದರ್ಶಕ ಹಾಗೂ ಬಲಿಷ್ಠ ಸರ್ಕಾರವನ್ನು ರಚಿಸುವಲ್ಲಿ ಸಂವಿಧಾನ ಪಾತ್ರ ಬಹಳ ದೊಡ್ಡದು.
ಭಾರತ ಸಂಕೀರ್ಣತೆಯನ್ನು ಹೊಂದಿದ ದೇಶ. ನಾಗರಿಕರಾದವನು ಸಂವಿಧಾನದ ಅಡಿಯಲ್ಲಿ ಜಾಗೃತ ಸಮಾಜವನ್ನು ನಿರ್ಮಿಸಬೇಕಿದೆ. ಸಂವಿಧಾನದ ಪರಿಧಿಯೊಳಗೆ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮಿ ಹಡಪದ್ ನಿರೂಪಿಸಿದರು, ಲಕ್ಷ್ಮೀಬಾಯಿ ಮನೆ ವಂದಿಸಿದರು, ಪ್ರಿಯಾಂಕಾ ತಿಳಗಾರ ಪ್ರಾರ್ಥಿಸಿದರು, ವಿದ್ಯಾ ಬಿ. ವೈ ಸ್ವಾಗತಿಸಿದರು, ಮೀರಾ ನದಾಫ್ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
18th October 2024
ಹೆಣ್ಣು ಮಗುವಿನ ಮೇಲೆ ತಾತ್ಸಾರ ಮತ್ತು ತಿರಸ್ಕಾರದ ಭಾವನೆ ಬೇಡ: ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ
ಧಾರವಾಡ ಅಕ್ಟೋಬರ್.18: ಸಮಾಜದಲ್ಲಿ ಮೂಢನಂಬಿಕೆ ಮತ್ತು ಮೌಢ್ಯತೆಯ ತಪ್ಪು ಕಲ್ಪನೆಗಳಿಂದ ಹೆಣ್ಣು ಮಗುವಿನ ಮೇಲೆ ತಾತ್ಸಾರ ಮತ್ತು ತಿರಸ್ಕಾರದ ಭಾವನೆ ಬೇಡವೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಜಿಲ್ಲೆಯಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿಗಳಿಗೆ ಪಿಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ 1994 ರ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಗೌರವವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹೆಣ್ಣು ಮಗುವಿನ ಹತ್ಯೆ ಪ್ರಕರಣಗಳು ಅತಿ ಹೆಚ್ಚು ಬೆಳಕಿಗೆ ಬರುತ್ತಿದ್ದು, ಇಂತಹ ಪ್ರಕರಣಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಅವರು ಹೇಳಿದರು.
ಬಸವಣ್ಣ, ಅಕ್ಕಮಹಾದೇವಿ, ಸಾವಿತ್ರಿಬಾಯಿ ಪುಲೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅನೇಕ ಮಹಾನ ವ್ಯಕ್ತಿಗಳು ಮಹಿಳೆಯರ ಶಿಕ್ಷಣ ಹಕ್ಕು, ಸಮಾನತೆ ಹಾಗೂ ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರಕಿಸುವಲ್ಲಿ ಹೆಚ್ಚು ಆದ್ಯತೆ ನೀಡಿದ್ದರು ಎಂದು ಅವರು ತಿಳಿಸಿದರು.
ಮೂಢನಂಬಿಕೆ ಮತ್ತು ಮೌಢ್ಯತೆ, ತಪ್ಪು ಕಲ್ಪನೆಗಳಿಂದ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಹೆಚ್ಚಾಗುತ್ತಿದೆ. ಭ್ರೂಣ ಹತ್ಯೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರಿಂದ ಭ್ರೂಣ ಹತ್ಯೆಗಳನ್ನು ತಡೆಯಬಹುದು ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಅವರು ಮಾತನಾಡಿ, ಇಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಹೆಚ್ಚುತ್ತಿದೆ. ಭ್ರೂಣ ಹತ್ಯೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಭ್ರೂಣ ಹತ್ಯೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣದಿಂದ ಬದಲಾವಣೆ ಕಾಣಬಹುದು. ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಮ್ಮ ಮನೆಯಿಂದಲೇ ಪ್ರಾರಂಭಿಸಬೇಕು. ಭ್ರೂಣ ಹತ್ಯೆ ತಡೆಗಟ್ಟಲು ಸಮಾಜದಲ್ಲಿ ಉತ್ತಮ ಸಂದೇಶವನ್ನು ಬಿತ್ತರಿಸುವ ಕೆಲಸವಾಗಬೇಕು ಎಂದು ಹೇಳಿದರು.
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ.ಯೋಗೇಂದ್ರ ಕಬಾಡಿ ಅವರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರಗಳು ನಿರ್ವಹಿಸಬೇಕಾದ ದಾಖಲಾತಿಗಳು ಹಾಗೂ ವಿವರದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅರವಳಿಕೆ ತಜ್ಞ ಹಾಗೂ ವೈದ್ಯಕೀಯ ಸಲಹೆಗಾರ ಡಾ. ಶಿವಕುಮಾರ ಕುಂಬಾರ ಅವರು ಪಿಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯ ಕುರಿತು ಉಪನ್ಯಾಸ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರು ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುಜಾತಾ ಮುರಾರಿ ಅವರು ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಡಾ. ಕಮಲಾ ಬೈಲೂರ ವಂದಿಸಿದರು.
ಜಿಲ್ಲಾ ನೋಡಲ್ ಅಧಿಕಾರಿ ಡಾ. ಮಹೇಶ ಚಿತ್ತರಗಿ ಅವರು ವೇದಿಕೆಯಲ್ಲಿದ್ದರು.
ಪೆÇಲೀಸ್ ಇಲಾಖೆ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಗಳು, ಜಿಲ್ಲೆಯ ಖಾಸಗಿ ಮತ್ತು ಸರಕಾರಿ ವೈದ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಹಾಗೂ ಮೇಲ್ವಿಚಾರಕರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
**
18th October 2024
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಜಿಲ್ಲೆಗೆ ಇಂದು ಬೆಳಿಗ್ಗೆ ಆಗಮಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ವಿಜಯ ಜ್ಯೋತಿ ಯಾತ್ರಾ ರಥವನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಡಿಸಿ ಕಚೇರಿ ಮುಂಭಾಗದಲ್ಲಿ ಸ್ವಾಗತಿಸಿ, ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ಕವಿವ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ, ತಹಶಿಲ್ದಾರ ಡಿ.ಎಚ್.ಹೂಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕನ್ನಡ ಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದು, ಪುಷ್ಪಾರ್ಚಣೆ ಮಾಡಿದರು. ಮತ್ತು ಕಲಾ ತಂಡಗಳು ಭಾಗವಹಿಸಿದ್ದವು.