
29th November 2024
ಆಟೋ ಚಾಲಕರ ಕನ್ನಡ ಪ್ರೇಮ ಪ್ರಶಂಸಾರ್ಹ-ಎಸ್.ನಾರಾಯಣ್
* ಮಂಡ್ಯ ಪ್ರೆಸ್ ನ್ಯೂಸ್
ಮಂಡ್ಯ:ರಾಜ್ಯದಲ್ಲಿ ಕನ್ನಡ ವಿಜೃಂಭಿಸುತ್ತಿರುವುದು ಕನ್ನಡ ಸಾರ್ವಭೌಮ ಆಟೋ ಚಾಲಕರಿಂದ. ಆಟೋ ಚಾಲಕರ ಕನ್ನಡ ಪ್ರೇಮ ಪ್ರಶಂಸಾರ್ಹ ಎಂದು ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಹೇಳಿದರು.
ಮಂಡ್ಯ ನಗರದ ಹೃದಯ ಭಾಗವಾದ ಹೊಸಹಳ್ಳಿ ವೃತ್ತದ ಎಸ್.ಡಿ.ಜಯರಾಮ್ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆಗೆ ಆಹ್ವಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಟೋ ಚಾಲಕರು ಆಟೋ ನಿಲ್ದಾಣಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ, ವಿಶ್ವೇಶ್ವರಯ್ಯ, ಎಸ್.ಡಿ.ಜಯರಾಂ,ಕೆAಪೇಗೌಡ,ಬಿ.ಆರ್.ಅAಬೇಡ್ಕರ್ ಆಟೋ ನಿಲ್ದಾಣ ಎಂದು ಹೆಸರಿಡುವ ಮೂಲಕ ಅವರ ಹೆಸರುಗಳನ್ನು ಚಿರಸ್ಥಾಯಿಯಾಗಿ ಇರಿಸಿದ್ದಾರೆ. ಅದೇ ರೀತಿ ಆಟೋಗಳ ಮೇಲೆ ಹಲವು ರೀತಿಯ ಸಾಹಿತ್ಯಗಳನ್ನು ಪ್ರದರ್ಶಿಸುವ ಮೂಲಕ ನಿತ್ಯ ಕನ್ನಡ ಸಾಹಿತ್ಯವನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಎಸ್.ಡಿ.ಜಯರಾಮ್ ಆಟೋ ನಿಲ್ದಾಣದಲ್ಲಿ ಪ್ರತಿ ವರ್ಷವೂ ಕನ್ನಡ ರಾಜ್ಯೋತ್ಸವ ಹಾಗೂ ಇತಿಹಾಸ ಪುರುಷರ ಜನ್ಮದಿನವನ್ನು ಆಚರಿಸುತ್ತಾ ಬಂದಿದ್ದೇವೆ. ರಾಮನಗರದ ಮಾಜಿ ಶಾಸಕ ಲಿಂಗಪ್ಪ ಅವರು ಆಟೋ ಚಾಲಕರಿಗೆ ನಿವೇಶನ ಒದಗಿಸಿಕೊಟ್ಟಿದ್ದಾರೆ. ಅದೇ ರೀತಿ ಇಲ್ಲಿನ ಶಾಸಕರುಗಳು ನಿವೇಶನ ಒದಗಿಸಿಕೊಡಬೇಕು. ಸುರಕ್ಷಿತವಾದ ಆಟೋ ನಿಲ್ದಾಣ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯೋತ್ಸವದ ಯಶಸ್ವಿಗೆ ಆಟೋ ಚಾಲಕರು ಸಾಕಷ್ಟು ಶ್ರಮಿಸಿದ್ದಾರೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕುವೆಂಪುರವರ ಮಾತಿನಂತೆ ಕನ್ನಡಕ್ಕಾಗಿ ಹೋರಾಡಿವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದರು. ರಾಜ್ಯೋತ್ಸವದ ಯಶಸ್ವಿಗೆ ಕನ್ನಡ ಮನಸ್ಸುಗಳು ಸಹಕರಿಸಿದ್ದಾರೆ ಎಂದು ಹೇಳಿದರು.
ಕನ್ನಡ ಬೆಳೆಸಬೇಡಿ, ಬಳಸಿ.
ನಾವು ಯಾವಾಗಲೂ ಕನ್ನಡ ಬೆಳೆಸಿ ಎಂದು ಹೇಳುತ್ತೇವೆ. ಕನ್ನಡ ಭಾಷೆ ಬೆಳೆಸುವ ಅವಶ್ಯಕತೆ ಇಲ್ಲ. ಹೆಚ್ಚಾಗಿ ನಿತ್ಯವೂ ಬಳಸಿದರೆ ಭಾಷೆ ಉಳಿಯುತ್ತದೆ. ಖಾಸಗಿ ಕಂಪನಿಗಳು ಮತ್ತು ಯಾರೊಂದಿಗಾದರೂ, ಯಾವುದೇ ದೂರವಾಣಿ ಕರೆ ಬಂದರೂ ಸಹ ಕನ್ನಡದಲ್ಲಿ ಮಾತನಾಡುವುದನ್ನು ಕಲಿಯಿರಿ. ತನ್ನಿಂತಾನೆ ಕನ್ನಡ ಭಾಷೆ ಬೆಳೆಯುತ್ತದೆ ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ
ರಾಜ್ಯದಲ್ಲಿ ಪರಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಸುವರ್ಣ ಕರ್ನಾಟಕ ಸಂಭ್ರಮದ ಸಂದರ್ಭದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.೨೦ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ ಆಯೋಜಿಸಲಾಗಿದೆ. ಮನೆ ಮಂದಿಯೆಲ್ಲ ಕುಟುಂಬ ಸಮೇತರಾಗಿ ಭಾಗವಹಿಸಿ ಎಂದು ಮನವಿ ಮಾಡಿದರು.
ಸಮ್ಮೇಳನಕ್ಕೆ ರಾಜ್ಯದ ಎಲ್ಲ ಜಿಲ್ಲೆ, ಹೊರ ರಾಜ್ಯ, ಹೊರ ದೇಶಗಳಿಂದ ಲಕ್ಷಾಂತರ ಮಂದಿ ಭಾಗವಹಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಶೇ.೮೨ಕ್ಕೂ ಹೆಚ್ಚು ಕನ್ನಡ ಮಾತನಾಡುವವರಿದ್ದು, ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕನ್ನಡತನ ಮೆರೆಯಲು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಜಯರಾಂ ಆಸ್ಪತ್ರೆಯ ಡಾ.ಮಾದೇಶ್, ಶಂಕರೇಗೌಡ, ಮಂಗಲ ಎಂ.ಸಿ.ಲAಕೇಶ್, ಆಟೋ ಸಂಘದ ಅಧ್ಯಕ್ಷರಾದ ನಿಂಗಣ್ಣ, ನಟರಾಜ್, ಕೃಷ್ಣಣ್ಣ, ದೇವರಾಜ್, ಎಲ್ಲಾ ಆಟೋ ಚಾಲಕರು ಕನ್ನಡದ ಅಭಿಮಾನಿಗಳು ಭಾಗವಹಿಸಿದ್ದರು.