
25th November 2024
ಅನ್ನದಾತನಿಗೆ ಆರ್ಥಿಕ ಭದ್ರತೆ ಜೋತೆ ಸಾಮಾಜಿಕ ಮನ್ನಣೆ
*ಮುನ್ನೂರು ರೈತರಿಗೆ ' ಭೂಮಿ' ಪ್ರಶಸ್ತಿ*
ದಾವಣಗೆರೆ: ಡಿಜಿಟಲ್ ತಂತ್ರಜ್ಞಾನವನ್ನು ಅತ್ಯಂತ ಸರಳೀಕರಣಗೊಳಿಸಿ, ರೈತರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ, ಕೃಷಿ ವಿಧಾನ ಸುಧಾರಣೆ ಸಾಮಾಜಿಕ ಭದ್ರತೆ ಮತ್ತು ಗೌರವ ಸಿಗುವ ನಿಟ್ಟಿನಲ್ಲಿ 'ಭೂಮಿ' ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ರೈತರ ಬೆಳೆಗಳಿಗೆ ಉತ್ತಮ ಆದಾಯ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ, 'ಭೂಮಿ' ಸಂಸ್ಥೆ, ಇದೀಗ ಇನ್ನೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ.
ನಗರದಲ್ಲಿ ಇಂದು ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಭೂಮಿ ಸಂಸ್ಥೆಯ ಸಂಸ್ಥಾಪಕ ಕಾರ್ಯ ನಿರ್ವಹಣಾಧಿಕಾರಿ ರಘುನಂದನ್, ಇದೇ ಪ್ರಥಮ ಬಾರಿಗೆ ರಾಜ್ಯ ಎಲ್ಲಾ ಜಿಲ್ಲೆಗಳಿಂದ ಆಯ್ಕೆ ಮಾಡಿ, ಮುನ್ನೂರು ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಯುವ ಈ ಸಮಾರಂಭಕ್ಕೆ ಬರುವ ರೈತರಿಗೆ ಉಚಿತ ಪ್ರಯಾಣ, ವಸತಿ ಮತ್ತು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ರಘುನಂದನ್ ತಿಳಿಸಿದರು.
'ಐ ಸಪೂರ್ಟ ಫಾರ್ಮರ್' ಎಂಬ ವಿನೂತನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರೈತರಿಗೆ ಆನ್ಲೈನ್ ಮೂಲಕ ಪ್ರೋತ್ಸಾಹ ಧನ ನೀಡಲಾಗುವುದು. ಇದಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗಿದೆ ಎಂದು ರಘುನಂದನ್ ವಿವರಿಸಿದರು.
ರೈತರಿಗೆ ಮಾರ್ಗದರ್ಶನ, ಉತ್ತಮ ಮಾರುಕಟ್ಟೆ ಹಾಗೂ ಅವರ ಜೀವನ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ 'ಭೂಮಿ' ಸಂಸ್ಥೆ ಸೇವೆ ಸಲ್ಲಿಸುತ್ತಿದೆ ಎಂದು ಅವರು ಹೇಳಿದರು. ರೈತರಿಗೆ ಸಾಮಾಜಿಕ ಮನ್ನಣೆ ಹಾಗೂ ಗೌರವ ಸಿಗುವ ನಿಟ್ಟಿನಲ್ಲಿ ಅನೇಕ ಮಹತ್ವದ ಯೋಜನೆಗಳನ್ನು ಸಂಸ್ಥೆ ಹಮ್ಮಿಕೊಂಡಿದೆ.
'ಭೂಮಿ' ಸಂಸ್ಥೆಯ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಹನುಮೇಶ್ ಕೆ ಯಾವಗಲ್ ಮಾತನಾಡಿ, ದೇಶ ಕಾಯುವ ಯೋಧರಿಗೆ ಕೊಡುವ ಯೋಧರಿಗೆ ಸಿಗುವ ಗೌರವ ಅನ್ನ ಕೊಡುವ ರೈತರಿಗೂ ಸಿಗಬೇಕು. ದೇಶದ ಭದ್ರತೆ ಎಷ್ಟು ಮುಖ್ಯವೋ ಅಷ್ಟೇ ದೇಶದ ಜನರಿಗೆ ಆಹಾರ ಭದ್ರತೆ ಬೇಕು ಎಂದರು. ಕೃಷಿ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಉದ್ಯೋಗ ಅವಕಾಶಗಳಿದ್ದು, ಈ ಕ್ಷೇತ್ರದತ್ತ ಯುವ ಜನಾಂಗ ಆಕರ್ಷಿಸುವ ಉದ್ದೇಶದಿಂದ 'ಭೂಮಿ' ಸಂಸ್ಥೆ ಸೇವೆ ಸಲ್ಲಿಸುತ್ತಿದೆ ಎಂದರು.