
23rd November 2024
ಕಲಬುರಗಿ,ನ.೨೨(ಕ.ವಾ) ಮುಂಬೈನ ಸೋಲಿಗೆ ಸಮರ್ಥ ಪ್ರತಿಕಾರ ನೀಡುವಲ್ಲಿ ಅಮೆರಿಕನ್ ಆಟಗಾರ ನಿಕ್ ಚಾಪೆಲ್ ಯಶಸ್ವಿಯಾದರು. ಐಟಿಎಫ್ ಕಲಬುರಗಿ ಓಪನ್ ಟೆನಿಸ್ ಟೂರ್ನಿಯಲ್ಲಿ ಅಮೆರಿಕದ ನಿಕ್ ಚಾಪೆಲ್ ತಮ್ಮ ಕಳೆದ ವಾರ ಮುಂಬೈನಲ್ಲಿ ಕರಣ್ ಸಿಂಗ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲು ಕಂಡಿದ್ದರು, ಇದಕ್ಕೆ ಸ್ಪಷ್ಟ ತಿರುಗೇಟು ನೀಡುವಲ್ಲಿ ತಮ್ಮ ಪೂರ್ಣ ಶ್ರಮ ಪ್ರಯೋಗಿಸಿದರು. ಶುಕ್ರವಾರ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಟೆನಿಸ್ ಟೂರ್ನಿಯ ಆರಂಭಿಕ ಕ್ವಾರ್ಟರ್ ಫೈನಲ್ ಪಂದ್ಯ ನೋಡುಗರ್ನನು ಕುರ್ಚಿಯ ತುದಿಗೆ ತಂದು ಕೂರಿಸಿತು. ೩೨ ವರ್ಷದ ಎಡಗೈ ಆಟಗಾರ ನಿಕ್ ಚಾಪೆಲ್ ತಮ್ಮ ರಾಕೆಟ್ ಪ್ರಭಾವ ಬಳಸಿ ಭಾರತೀಯ ಆಟಗಾರನ ವಿರುದ್ಧ ೭-೫, ೬- ೨ ಅಂಕಗಳ ಮೂಲಕಗೆಲುವುಸಾಧಿಸಿದರು ಜೊತೆಗೆ ಸೆಮಿಫೈನಲ್ ಕಡೆಗೆ ಹೆಜ್ಜೆ ಹಾಕಿದರು.
ಪ್ರತಿಷ್ಠಿತ ೨೫, ೦೦೦ ಡಾಲರ್ ಮೊತ್ತದ ಪಂದ್ಯಾವಳಿಯಲ್ಲಿ ರಷ್ಯಾದ ಬೊಗ್ಡಾನ್ ಬೊಬ್ರೋವ್ ತಮ್ಮ ಎದುರಾಳಿ ಆರ್ಯನ್ ಷಾ ವಿರುದ್ಧ ನಿರಾಯಾಸದ ಗೆಲುವು ಸಾಧಿಸಿದರು, ಷಾ ವಿರುದ್ಧ ೭-೫, ೬-೩ ಅಂತರದ ವಿಜಯ ಘೋಷಿಸಿ, ಅಗ್ರ ಶ್ರೇಯಾಂಕವನ್ನು ಪಡೆದರು.ಸೆಮಿಫೈನಲ್ ಮತ್ತೊಂದು ರಾಕೆಟ್ ಕದನದಲ್ಲಿ ಅಗ್ರ ಶ್ರೇಯಾಂಕ್ ಖುಮೊಯುನ್ ಸುಲ್ತಾನೋವ್ ಭಾರತದ ದೇವ್ ಜಾವಿಯಾ ವಿರುದ್ಧ ಜಯ ದಾಖಲಿಸಿದರು. ಉಜ್ಬೇಕಿಸ್ಥಾನದ ಪಟು ರಷ್ಯಾದ ಮ್ಯಾಕ್ಸಿಮ್ ಝಕೋವ್ ವಿರುದ್ಧ ನೇರ ಸೆಟ್ ಗಳಲ್ಲಿ ( ೬-೨, ೬-೩) ಅಂತರದಲ್ಲಿ ಜಯಗಳಿಸಿದರು. ಈ ನಡುವೆ ಜಾವಿಯಾ ಒಂದು ಪಂದ್ಯವನ್ನಷ್ಟೆ ಆಡಿದರು, ಎದುರಾಳಿ ಸಿದ್ದಾರ್ಥ್ ರಾವತ್ ತಲೆತಿರುಗುವಿಕೆ ಸಮಸ್ಯೆಯಿಂದ ವೈದ್ಯರ ಸಲಹೆ ಪಡೆದು ಆಟದಿಂದ ನಿರ್ಗಮಿಸಿದರು.
ನಿಕ್ ಚಾಪೆಲ್ ಹಾಗೂ ಕರಣ್ ಸಿಂಗ್ ಪಂದ್ಯದಲ್ಲಿ ಚಾಪೆಲ್ ಉತ್ತಮ ಆರಂಭವನ್ನೇ ಪ್ರದರ್ಶಿಸಿದರು, ಆದರೆ ಕರಣ್ ಸಿಂಗ್ ಆಕ್ರಮಣಕಾರಿ ಹೊಡೆತಗಳನ್ನು ಸ್ವಾಗತಿಸುತ್ತಲೇ ಚಾಪೆಲ್ ವಿರುದ್ಧ ಆರ್ಭಟಿಸಿದರು. ಪಂದ್ಯದ ವಿವಿಧ ಹಂತಗಳಲ್ಲ ತಪ್ಪುಗಳ ಸುಳಿಗೆ ಸಿಲುಕಿದ ಕರಣ್ ಸುಲಭದ ಸರ್ವ್ ಮೂಲಕ ಚಾಪೆಲ್ ಗೆಲುವಿಗೆ ದಾರಿ ಮಾಡಿಕೊಟ್ಟರು. ಬೇಗ ಪಾಯಿಂಟ್ ಪಡೆಯಲು ಯತ್ನಿಸಿದ ಇಬ್ಬರ ಪೈಕಿ ನಾಲ್ಕನೇ ಪಂದ್ಯದಲ್ಲಿ ಚಾಪೆಲ್ ಗೆ ಬ್ರೇಕ್ ಮಾಡಲು ಅವಕಾಶ ಮಾಡಿಕೊಡಲು ಡ್ರಾಪ್ ಶಾಟ್ ಗಳನ್ನು ಆಡಿದರು, ನಿಪುಣ ಚಾಪೆಲ್ ಕರಣ್ ಎಲ್ಲಾ ದೋಷಗಳನ್ನು ಬಳಸಿಕೊಂಡು ಮುನ್ನುಗ್ಗಿದರು.
22nd October 2024
ಮಲ್ಲಮ್ಮ ನುಡಿ ವಾರ್ತೆ
ಬಳ್ಳಾರಿ,ಅ.22:ದೈಹಿಕ ಮತ್ತು ಮಾನಸಿಕ ಮನೋಲ್ಲಾಸಕ್ಕೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ ಮುನಿರಾಜು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಿರುವ ಎರಡು ದಿನಗಳ ಅಂತರ್ ಮಹಾವಿದ್ಯಾಲಯ ಪುರುಷರ ಕಬಡ್ಡಿ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಶ್ರದ್ಧೆಯಿಂದ ಕ್ರೀಡೆಗಳನ್ನು ಕಲಿತುಕೊಂಡು ಆಡಬೇಕು. ಇದರಿಂದ ಆರೋಗ್ಯವೂ ವೃದ್ಧಿಸುತ್ತದೆ. ಕ್ರೀಡಾಪಟುಗಳಲ್ಲಿ ಸ್ಪರ್ಧಾ ಮನೋಭಾವ ಇರಬೇಕು. ಜೀವನದಲ್ಲಿ ಶಿಸ್ತು ಕಲಿಸಿಕೊಟ್ಟ ಶಾಲಾ ಮಟ್ಟದ ದೈಹಿಕ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಮನನ ಮಾಡಿಕೊಂಡರು.
ಕುಲಸಚಿವರಾದ ಎಸ್.ಎನ್.ರುದ್ರೇಶ್ ಅವರು ಮಾತನಾಡಿ, ಕ್ರೀಡೆಗಳಿಂದ ಮಾನಸಿಕ ಒತ್ತಡವನ್ನು ನಿಭಾಯಿಸಬಹುದು. ಕ್ರೀಡೆ ಮತ್ತು ಸಂಸ್ಕೃತಿಯನ್ನು ಅನುಭವಿಸುವುದರ ಜೊತೆಗೆ ಆಸ್ವಾದಿಸಬೇಕು. ದೇಸಿ ಕಲೆಗಳಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಹೊಣೆ ಎಂದರು.
ಕ್ರೀಡಾAಗಣ ನಿರ್ಮಾಣ ಮತ್ತು ಕ್ರೀಡಾ ವಿಭಾಗಕ್ಕೆ ಪ್ರತ್ಯೇಕ ಕಟ್ಟಡಕ್ಕೆ ಈ ಬಾರಿಯ ಬಜೆಟ್ನಲ್ಲಿ ಹಣ ಮೀಸಲಿಡಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರಗೌಡ ಅವರು ಮಾತನಾಡಿ, ದೈಹಿಕ ಸದೃಢತೆ ಕಾಪಾಡಿಕೊಳ್ಳುವುದು ಪ್ರತಿ ಕ್ರೀಡಾಪಟುವಿನ ಮೊದಲ ಆದ್ಯತೆ ಆಗಬೇಕು. ಮುಂಬರುವ ಓಲಿಂಪಿಕ್ಸ್ ಕ್ರೀಡೆಗಳಲ್ಲಿ ಕಬಡ್ಡಿ ಮತ್ತು ಖೋ-ಖೋ ಕ್ರೀಡೆಗಳನ್ನು ಆರಂಭಿಸಲು ಸರ್ಕಾರಕ್ಕೆ ಮನವಿ ಪತ್ರ ನೀಡಲಾಗಿದೆ ಎಂದರು.
ಕ್ರೀಡಾ ವಿಭಾಗದ ನಿರ್ದೇಶಕ ಡಾ.ಶಶಿಧರ್ ಕೆಲ್ಲೂರ್, ಸಹಾಯಕ ಪ್ರಾಧ್ಯಾಪಕ ಡಾ.ಸಂಪತ್ ಕುಮಾರ್ ವೇದಿಕೆಯಲ್ಲಿದ್ದರು.
22nd October 2024
ಮಲ್ಲಮ್ಮ ನುಡಿ ವಾರ್ತೆ
ತಾಳಿಕೋಟಿ: ಪಟ್ಟಣದಲ್ಲಿ ನವಂಬರ್ 3 ರಿಂದ 5 ರವರೆಗೆ ರಾಜ್ಯಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು ಇದರ ಯಶಸ್ವಿಗೆ ಎಲ್ಲರ ಸಹಕಾರದ ಅಗತ್ಯ ಇದೆ ಎಂದು ಶ್ರೀ ಸಂಗಮಾರ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಪಾಟೀಲ ಹೇಳಿದರು.ಸೋಮವಾರ ಪಟ್ಟಣದ ಶ್ರೀ ಎಚ್.ಎಸ್. ವಿದ್ಯಾ ಸಂಸ್ಥೆ ಆವರಣದಲ್ಲಿ ನ.3-5ರವರೆಗೆ ಜರುಗಲಿರುವ ಪ.ಪೂ. ಮಹಾವಿದ್ಯಾಲಯಗಳ ಬಾಲಕ- ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟ ಅಂಗವಾಗಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಈ ಕ್ರೀಡಾಕೂಟದಲ್ಲಿ ರಾಜ್ಯದಿಂದ ಸುಮಾರು 32 ಜಿಲ್ಲೆಗಳ ಪದವಿ ಪೂರ್ವ ಮಹಾವಿದ್ಯಾಲಯಗಳ ವಾಲಿಬಾಲ್ ಕ್ರೀಡಾಪಟುಗಳು ಆಗಮಿಸಲಿದ್ದು ನ.3 ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ ಇದರಲ್ಲಿ ರಾಜ್ಯ ಹಾಗೂ ಜಿಲ್ಲೆಯ ಸಚಿವರು ಶಾಸಕರು ಪರಿಷತ್ ಸದಸ್ಯರು ಭಾಗವಹಿಸಲಿದ್ದು ಕ್ಷೇತ್ರದ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅಧ್ಯಕ್ಷತೆ ವಹಿಸುವರು. ಕ್ರೀಡಾಕೂಟವನ್ನು ರಾಜ್ಯಮಟ್ಟದ ಮಾತ್ರವಲ್ಲ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನಾಗಿ ಮಾಡಲು ಎಲ್ಲರೂ ಸಹಕರಿಸಿ ಎಂದರು.ಸಾಹಿತಿ ಶ್ರೀಕಾಂತ್ ಪತ್ತಾರ ಹಾಗೂ ಘನಮಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸಜ್ಜನ ಮಾತನಾಡಿ ಪಟ್ಟಣ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ರಾಜ್ಯದಲ್ಲಿ ಹೆಸರುವಾಸಿಯಾಗಿದೆ ಈ ಕ್ರೀಡಾಕೂಟವನ್ನೂ ಐತಿಹಾಸಿಕವಾದ ಕ್ರೀಡಾಕೂಟವನ್ನಾಗಿಸಲು ಪಟ್ಟಣದ ಎಲ್ಲ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಎಚ್.ಎಸ್.ಪಾಟೀಲರಿಗೆ ಎಲ್ಲ ರೀತಿಯಿಂದಲೂ ಸಹಕರಿಸಲು ಸಿದ್ಧರಿದ್ದೇವೆ ಎಂದರು.ನಿವೃತ್ತ ದೈಹಿಕ ಶಿಕ್ಷಕ ಆರ್.ಎಲ್.ಕೊಪ್ಪದ ಮಾತನಾಡಿ ಪಟ್ಟಣದಲ್ಲಿ ಎರಡನೇ ಬಾರಿಗೆ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯುತ್ತಿದೆ ಇದರ ಎಲ್ಲ ಸಿದ್ಧತೆಗಳು ವ್ಯವಸ್ಥಿತವಾಗಿ ಭರದಿಂದ ನಡೆದಿವೆ.ಇದು ಹೊನಲು ಬೆಳಕಿನ ಪಂದ್ಯಾವಳಿಯಾಗಿದೆ ಇದರಲ್ಲಿ 25 ತಾಂತ್ರಿಕ ಕ್ರೀಡಾಧಿಕಾರಿಗಳು, 30 ತಾಲೂಕ ದೈಹಿಕ ಶಿಕ್ಷಣಾಧಿಕಾರಿಗಳು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನುಭವಿ ನಿರ್ಣಾಯಕರು ಕೆಲಸ ಮಾಡಲಿದ್ದಾರೆ.ಇಲ್ಲಿ ನಾಲ್ಕು ಕ್ರೀಡಾ ಮೈದಾನಗಳನ್ನು ಸಿದ್ಧಪಡಿಸಲಾಗುತ್ತಿದೆ. ಪಂದ್ಯಗಳನ್ನು ವೀಕ್ಷಿಸಲು 500 ಮೀಟರ್ ಗ್ಯಾಲರಿ ಇರಲಿದ್ದು ಸುಮಾರು 5 ಸಾವಿರ ಜನರು ಪಂಧ್ಯಗಳನ್ನು ವೀಕ್ಷಿಸಬಹುದಾಗಿದೆ. ಕ್ರೀಡಾಪಟುಗಳ ರಕ್ಷಣೆ ಅವರ ಆರೋಗ್ಯ ತಪಾಸಣೆ ಹಾಗೂ ಕ್ರೀಡಾ ಆಹಾರದ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುವುದು. ಉದ್ಘಾಟನಾ ಕಾರ್ಯಕ್ರಮದ ಪೂರ್ವ ಪಟ್ಟಣದಲ್ಲಿ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯುವುದು. ನ.೫ ರಂದು ಪ್ರಶಸ್ತಿ ವಿತರಣಾ ಕಾರ್ಯಕ್ರಮ ಜರಗುವುದು. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಗುವುದು. ಪಟ್ಟಣದಲ್ಲಿ ವಾಲಿಬಾಲ್ ಕ್ರೀಡೆಗಾಗಿ ಸೇವೆ ಸಲ್ಲಿಸಿ ನಿಧನರಾದವರಿಗೆ ಸಂತಾಪ ಸಭೆ ಜರುಗಿಸಲಾಗುವುದು ಎಂದರು.
8th October 2024
ಮಲ್ಲಮ್ಮ ನುಡಿ ವಾರ್ತೆ
(ಪರಮೇಶ ರಾಂಪುರೆ)
ಕಮಲನಗರ:ತಾಲೂಕಿನ ಎಲ್ಲಾ ಗ್ರಾ.ಪಂ.ಗಳಲ್ಲಿ ಒಂದು ತಿಂಗಳ ಕಾಲ ನರೇಗಾ ಯೋಜನೆಯ 2025- 26 ನೇ ಸಾಲಿನ ಕಾರ್ಮಿಕರ ಆಯವ್ಯಯ ತಯಾರಿಸಲು ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ತಿಳಿಸಿದ್ದರು.
ಈ ಅಭಿಯಾನದಡಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಕುರಿತು ಜಾಗೃತಿ ಮೂಡಿಸಿ ಬೇಡಿಕೆ ಸ್ವೀಕರಿಸಲಾಗುವುದು. ಅದರಂತೆ ಯೋಜನೆಯಡಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಹಲವಾರು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಸೌಲಭ್ಯಗಳಿವೆ. ಇದರ ಲಾಭ ಪಡೆದುಕೊಳ್ಳಲು ಜನರು ತಮ್ಮ ತಮ್ಮ ಗ್ರಾಪಂಗೆ ಸಂಪರ್ಕಿಸಬೇಕು. ಕೂಲಿಕಾರರಿಂದ ಕೂಲಿ ಬೇಡಿಕೆ ಹಾಗೂ ಸಾರ್ವಜನಿಕರಿಂದ ಕಾಮಗಾರಿ ಬೇಡಿಕೆ ಸ್ವೀಕರಿಸಲು ವಾರ್ಡ್ ಸಭೆ ಹಾಗೂ ಗ್ರಾಮ ಸಭೆ ನಡೆಸಲಾಗುತ್ತದೆ. ಈ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುವುದು. ಅ.31ರೊಳಗಾಗಿ ಬೇಡಿಕೆಗಳ ಅರ್ಜಿಗಳನ್ನು ಸಂಬಂಧಪಟ್ಟ ಗ್ರಾಪಂಗೆ ಸಲ್ಲಿಸಬೇಕು ಎಂದರು.
ನರೇಗಾ ಯೋಜನೆಯಡಿ ಕೆಲಸ ಮಾಡುವ ಗಂಡು ಮತ್ತು ಹೆಣ್ಣು ಕೂಲಿಕಾರರಿಗೆ ಸಮಾನ ಕೂಲಿ ದರ 349 ರೂ. ಇದ್ದು, ಕುಟುಂಬವೊಂದಕ್ಕೆ ವರ್ಷದಲ್ಲಿ 100 ದಿನ ಕೆಲಸ ನೀಡಲಾಗುವುದು. ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಅಭಿಯಾನದ ಭಾಗವಾಗಿ ಅ.31 ರವರೆಗೆ ನರೇಗಾ ಯೋಜನೆ ಕುರಿತು ಅಭಿಯಾನದ ಜಾಗೃತಿ ವಾಹನದ ಮೂಲಕ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಪ್ರಚಾರಾಂದೋಲನ ಹಮ್ಮಿಕೊಂಡು ಮನೆ ಮನೆ ಜಾಥಾ ನಡೆಸಬೇಕು. ನರೇಗಾದ ವಿವಿಧ ಕಾಮಗಾರಿಗಳ ಬೇಡಿಕೆಯ ಅರ್ಜಿಗಳನ್ನು ಸ್ವೀಕರಿಸಲು ಜಾಗೃತಿ ವಾಹನದಲ್ಲಿ ಹಾಗೂ ಗ್ರಾಪಂ, ಗ್ರಂಥಾಲಯ, ನ್ಯಾಯಬೆಲೆ ಅಂಗಡಿ, ಅಂಗನವಾಡಿಯಲ್ಲಿ ಕಾಮಗಾರಿ ಬೇಡಿಕೆ ಸ್ವೀಕಾರ ಪೆಟ್ಟಿಗೆ ಇಡಬೇಕು. ಕೂಲಿಕಾರರು ವಲಸೆ ಹೋಗದೆ ಸ್ವಗ್ರಾಮದಲ್ಲೇ ನರೇಗಾದಡಿ ಕೆಲಸ ಮಾಡಬೇಕು. ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ.50ರಷ್ಟು ರಿಯಾಯಿತಿ ಇದೆ ಎಂದರು.