
20th February 2025
ಶೈಕ್ಷಣಿಕ ಕ್ಷೇತ್ರದಲ್ಲಿ ಹೆಡಗಿಮದ್ರಾ ಶ್ರೀಮಠದ ಸಾಧನೆ ಅದ್ಭುತ
ಯಾದಗಿರಿ : ಶೈಕ್ಷಣಿಕ ಕ್ಷೇತ್ರದಲ್ಲಿ ಹೆಡಗಿಮದ್ರಾ ಶ್ರೀಮಠದ ಸಾಧನೆ ಅದ್ಭುತವಾಗಿದ್ದು, ಶ್ರೀಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಮಹಾಸ್ವಾಮಿಗಳ ಕಾರ್ಯದ ಜೊತೆಗೆ ಈ ನಾಡಿನಲ್ಲಿ ಅನೇಕ ಮಠಾಧೀಶರು ವಿದ್ಯಾರ್ಜನೆಗಾಗಿ ಕೈಗೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಭಗವತ್ಪಾದರು ಹೇಳಿದರು.
ತಾಲೂಕಿನ ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿ ಮಠದ ಆವರಣದಲ್ಲಿ ಎಸ್.ಎಸ್.ವಿದ್ಯಾಪೀಠದ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಧರ್ಮ ಸಂಸ್ಕೃತಿಯ ಕಾರ್ಯದ ಜೊತೆಗೆ ದೊಡ್ಡ ದೊಡ್ಡ ಪೀಠಗಳು ಶೈಕ್ಷಣಿಕ ಕಾರ್ಯಮಾಡುತ್ತಿದ್ದಾರೆ, ಆದರೆ ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಶಾಖಾಮಠಗಳು ಗ್ರಾಮೀಣ ಜನರ ಶೈಕ್ಷಣಿಕ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಮಠಾಧೀಶರ ಕಾರ್ಯ ಅತಿದೊಡ್ಡದು ಎಂದು ಹೇಳಿದರು.
ಭೌತಿಕ ಸಂಪತ್ತನ್ನು ಯಾರು ಬೇಕಾದರೂ ತಮ್ಮದನ್ನಾಗಿಸಿಕೊಳ್ಳಬಹುದು. ಆದರೆ, ಜ್ಞಾನ ಎಂಬುದು ಸಾಧಕನ ಸ್ವತ್ತು. ಗುರುಮುಖೇನ ವಿದ್ಯಾ ಸಂಪತ್ತು ಗಳಿಸಲು ಶ್ರದ್ದೆ ಬಹು ಮುಖ್ಯ ಎಂದು ಹೇಳಿದರು.
ಭೌತಿಕ ಸಂಪತ್ತಿಗಿAತ ವಿದ್ಯಾಸಂಪತ್ತು ಬಹು ದೊಡ್ಡ ಆಸ್ತಿ. ಹಾಗಾಗಿ ಜೀವನದಲ್ಲಿ ವಿದ್ಯೆ ಸಂಪಾದನೆಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಸಲಹೆ ನೀಡಿದರು.
ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿ ಮಠದ ಪೀಠಾಧಿಪತಿಗಳು ಹಾಗೂ ಎಸ್.ಎಸ್.ವಿದ್ಯಾಪೀಠದ ಅಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಮಹಾಸ್ವಾಮಿಗಳು ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವುದನ್ನು ಕಲಿಸುವ ಜತೆಗೆ ಬದುಕುವ ಕಲೆ, ಸಂಸ್ಕಾರ ಹಾಗೂ ಗುಣವಂತಿಕೆಯನ್ನು ಬೆಳೆಸುತ್ತಿದೆ ಎಂದರು.
ಇಂದಿನ ಮಕ್ಕಳು ನಾಳೆ ನಮ್ಮ ಧರ್ಮ ಮತ್ತು ಸಂಸ್ಕೃತಿಯ ಪ್ರತಿನಿಧಿಗಳಾಗಿ ಸಮಾಜವನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ರಾಚನಗೌಡ ಮುದ್ನಾಳ ಮಾತನಾಡಿ, ವಿದ್ಯಾರ್ಥಿಗಳು, ಜೀವನದಲ್ಲಿ ಗುರಿ ಮತ್ತು ಛಲ ಬೆಳೆಸಿಕೊಳ್ಳುವುದರ ಜತೆಗೆ ಕಠಿಣ ಪರಿಶ್ರಮದ ಮೂಲಕ ಸಾಧನೆಯ ಹಾದಿಯಲ್ಲಿ ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಬದುಕಿನಲ್ಲಿ ಬರುವ ಕಷ್ಟ ಮತ್ತು ಸಾಧಿಸಬೇಕೆಂಬ ಛಲದಿಂದ ನಾನು ನನ್ನ ಗುರಿಯನ್ನು ತಲುಪಲು ಸಾಧ್ಯವಾಯಿತು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಆಗ ಯಶಸ್ಸು ಸಾಧ್ಯ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ನೂರಾರು ವಿದ್ಯಾರ್ಥಿಗಳಿಗೆ ಶ್ರೀಗಳು ವಿದ್ಯಾದಾನ ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಜೀವನ ಬೆಳಕಾಗಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಸತತ ಪರಿಶ್ರಮ ಪಡಬೇಕು ಎಂದರು.
ದೇವಾಪುರದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಹಂಪ್ಪಣ್ಣ ಸಜ್ಜನ್, ನಾಗರತ್ನ ಕುಪ್ಪಿ, ಸಂಜಿವರಡ್ಡಿ ದರ್ಶನಪುರ, ಮಹಂತಯ್ಯ ಸ್ವಾಮಿ ಹೆಡಗಿಮದ್ರಾ, ಡಾ.ಸಿ.ಎಮ್ ಪಾಟೀಲ್, ಬಸವರಾಜ ಪಾಟೀಲ ಬಿಳ್ಹಾರ, ಸುಧಾಕರ ರಡ್ಡಿ ಅನಪುರ, ಬಸವರಾಜ ಎಲ್ಹೇರಿ, ಬಸ್ಸುಗೌಡ ಬಿಳಾರ, ರಾಯಪ್ಪಗೌಡ ಹುಡೆದ, ಸೇರಿದಂತೆ ಶಾಲಾ ಮಕ್ಕಳು ವಿವಿಧ ಗ್ರಾಮಸ್ಥರು ಉಪಸ್ಥಿತರಿದ್ದರು.
ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯ ಗಂಗಮ್ಮ ಮಲ್ಕಾರ ವಂದಿಸಿದರು.