23rd October 2024
ಕೇಂದ್ರ ಸರ್ಕಾರದಿಂದ ಇದೇ 23ಕ್ಕೆ ಕಿತ್ತೂರು ರಾಣಿ ಚನ್ನಮ್ಮಾಜಿಯ ಅಂಚೆ ಚೀಟಿ ಬಿಡುಗಡೆ..
ಕಿತ್ತೂರಿನ 200ನೇ ವರ್ಷದ ವಿಜಯೋತ್ಸವಕ್ಕೆ ಮೋದಿ ಸರ್ಕಾರದ ಕೊಡುಗೆ..
ಮೋದಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ..
ಬೆಳಗಾವಿ: ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮಾ ಜೀ ಅವರ 200ನೇ ವರ್ಷದ ಈ ಐತಿಹಾಸಿಕ ವಿಜಯದ ಜ್ಞಾಪಕಾರ್ಥವಾಗಿ ಇದೇ ಅಕ್ಟೋಬರ್ 23ಕ್ಕೆ ರಂದು ರಾಣಿ ಚೆನ್ನಮ್ಮನ ಅಂಚೆ ಚೀಟಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮೋದಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಬ್ರಿಟಿಷರ ವಿರುದ್ಧ ಸಾರಿದ ಸಂಗ್ರಾಮದ ವಿಜಯಕ್ಕೆ ಇದೇ ಅಕ್ಟೋಬರ್ 23ರಂದು 200 ವರ್ಷ ಸಂದಲಿದೆ. ಈ ಐತಿಹಾಸಿಕ ವಿಜಯದ ಜ್ಞಾಪಕಾರ್ಥವಾಗಿ ರಾಣಿ ಚೆನ್ನಮ್ಮನವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವಂತೆ ಕಿತ್ತೂರು ಕರ್ನಾಟಕ ನಿಯೋಗದ ಪ್ರಮುಖರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಅರವಿಂದ ಬೆಲ್ಲದ, ಅಭಯ ಪಾಟೀಲ, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಡಾ. ವಿ.ಆಯ್. ಪಾಟೀಲ ಹಾಗೂ ಪ್ರಮುಖರೊಂದಿಗೆ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರಲ್ಲಿ ಇದೇ ರಂದು ಆಗ್ರಹಿಸಲಾಗಿತ್ತು.
ತಕ್ಷಣವೇ ರಾಣಿ ಚೆನ್ನಮ್ಮನ ಅಂಚೆ ಚೀಟಿಯನ್ನು ಇದೇ ಅಕ್ಟೋಬರ್ 23ಕ್ಕೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ, ಮೋದಿ ಸರ್ಕಾರದ ತ್ವರಿತ ನಿರ್ಧಾರವು ರಾಣಿ ಚೆನ್ನಮ್ಮನಿಗೆ ಸಲ್ಲಿಸುತ್ತಿರುವ ಗೌರವ ಎಂದರು.
ಈ ತ್ವರಿತ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ಸಂವಹನಾ ಸಚಿವಾಲಯಕ್ಕೆ ಹಾಗೂ ಕಿತ್ತೂರು ಕರ್ನಾಟಕ ನಿಯೋಗದ ಪ್ರಮುಖರಿಗೆ ರಾಜ್ಯದ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
13th October 2024
ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಪ್ರತಿವರ್ಷ ಕೋಟ್ಯಂತರ ಭಕ್ತಾಧಿಗಳು ಭೇಟಿ ನೀಡುವುದರಿಂದ ಉತ್ತಮ ವಸತಿ ಹಾಗೂ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಇತರೆ ಮೂಲಸೌಕರ್ಯ ಒದಗಿಸುವುದು ಸರಕಾರದ ಪ್ರಥಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಪ್ರಥಮ ಸಭೆಯ ಅಧ್ಯಕತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುವ ಭಕ್ತಾಧಿಗಳಿಗೆ ಉತ್ತಮ ವಸತಿ ಹಾಗೂ ದರ್ಶನಕ್ಕೆ ಅನುಕೂಲ ಕಲ್ಪಿಸಬೇಕು. ದೇವಸ್ಥಾನ ಹಾಗೂ ಸುತ್ತಮುಲಿನಲ್ಲಿರುವ ಸರಕಾರದ ಜಮೀನು ಒತ್ತುವರಿ ಆಗದಂತೆ ತಡೆಯಲು ಕಂಪೌಂಡ್ ಹಾಕಬೇಕು ಎಂದು ತಿಳಿಸಿದರು.
ಸದ್ಯಕ್ಕೆ ವ್ಯಾಪಾರ-ವಹಿವಾಟು ಮಾಡುವ ಜನರಿಗೆ ಪ್ರತ್ಯೇಕ ಜಾಗೆಯನ್ನು ಗುರುತಿಸಿ, ಅವರಿಗೆ ಅವಕಾಶ ಕಲ್ಪಿಸಬೇಕು ಎಂದರು. ಪ್ರವಾಸೋದ್ಯಮ ಮಂಡಳಿ ಮತ್ತು ದೇವಸ್ಥಾನ ಮಂಡಳಿ ಸೇರಿಕೊಂಡು ಭಕ್ತಾಧಿಗಳಿಗೆ ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಉತ್ತಮ ಸೌಲಭ್ಯ ಒದಗಿಸಿದರೆ ಭಕ್ತಾಧಿಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ. ಸುಲಭ ದರ್ಶನಕ್ಕೆ ಅವಕಾಶ ಕಲ್ಪಿಸುವುದು ಪ್ರಥಮ ಆದ್ಯತೆಯಾಗಿರಬೇಕು.
ತಿರುಪತಿ ಮಾದರಿ ಸೌಕರ್ಯಕ್ಕೆ ಸೂಚನೆ: ತಿರುಪತಿ ಮಾದರಿಯನ್ನು ಅಧ್ಯಯನ ಮಾಡಿಕೊಂಡು ಅದೇ ಮಾದರಿಯಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
45 ಕೋಟಿ ಬ್ಯಾಂಕಿನಲ್ಲಿದ್ದು, ವಾರ್ಷಿಕ ಅಂದಾಜು 25 ಕೋಟಿ ಆದಾಯ ಬರುತ್ತಿದೆ. ಉತ್ತಮ ಸೌಲಭ್ಯ ಒದಗಿಸುವ ಮೂಲಕ ಭಕ್ತರ ಭೇಟಿಯ ಪ್ರಮಾಣವನ್ನು ಹೆಚ್ಚಿಸಬೇಕು. ಸುಕ್ಷೇತ್ರಗಳಿಗೆ ಭೇಟಿ ನೀಡುವವರು ಬಡವರೇ ಆಗಿದ್ದರೂ ಸಂಪ್ರದಾಯ ಮತ್ತು ಖರ್ಚು ವೆಚ್ಚಕ್ಕೆ ಯೋಚನೆ ಮಾಡುವುದಿಲ್ಲ. ಆದ್ದರಿಂದ ಉತ್ತಮ ಸೌಲಭ್ಯ ಒದಗಿಸಬೇಕು.
ಹುಣ್ಣಿಮೆ ಸಂದರ್ಭದಲ್ಲಿ ಚಕ್ಕಡಿಗಳಲ್ಲಿ ಜನರು ಬರುತ್ತಾರೆ. ಅಂತಹ ವೇಳೆ ಜಾನುವಾರುಗಳಿಗೆ ಮೇವು ಬ್ಯಾಂಕ್ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ದಾನಿಗಳು-ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾಕಷ್ಟು ಜಮೀನು ಲಭ್ಯವಿರುವುದರಿಂದ ವಸತಿ ಮತ್ತಿತರ ಸೌಲಭ್ಯ ಒದಗಿಸಲು ಮುಂದಾಗುವ ದಾನಿಗಳು ಮತ್ತು ಸಂಸ್ಥೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು. ಬರೀ ವಾಣಿಜ್ಯ ದೃಷ್ಟಿಯಿಂದ ನೋಡದೇ ಭಕ್ತಾಧಿಗಳಿಗೆ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲರಿಗೂ ಅವಕಾಶ ಒದಗಿಸಬೇಕು. ಸೋಲಾರ್ ಪಾರ್ಕ್, ರೋಪ್ ವೇ ಮತ್ತಿತರ ಯೋಜನೆಗಳನ್ನು ಜಾರಿಗೊಳಿಸಬೇಕು. ಪಿಪಿಪಿ ಮಾದರಿ ಯೋಜನೆಗಳಡಿ ಬಂಡವಾಳ ಹೂಡಿಕೆಗೆ ಮುಂದಾಗುವರಿಗೆ ಕನಿಷ್ಠ 60 ವರ್ಷ ಗುತ್ತಿಗೆ ನೀಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಪ್ರವಾಸೋದ್ಯಮ ಮತ್ತು ದೇವಸ್ಥಾನ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು.
ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ, ಯಲ್ಲಮ್ಮ ಸುಕ್ಷೇತ್ರಕ್ಕೆ ಆಗಮಿಸುವ ಬಹಳಷ್ಟು ಜನರು ಬಡವರು ಹಾಗೂ ಅನಕ್ಷರಸ್ಥರಾಗಿರುತ್ತಾರೆ. ಆದ್ದರಿಂದ ಸ್ವಚ್ಛತೆ, ವಸತಿ ಹಾಗೂ ಸುಗಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಪ್ರತಿಪಾದಿಸಿದರು. ಪಿಪಿಪಿ ಮಾದರಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು. ಮಹಾರಾಷ್ಟ್ರದ ಭಕ್ತರೊಬ್ಬರು ಎರಡು ಎಕರೆ ಜಾಗೆ ನೀಡಿದರೆ ಮೂರು ಮಹಡಿಯ ವಸತಿ ಸಮುಚ್ಛಯ ಸ್ಥಾಪಿಸಿಕೊಡುವ ಭರವಸೆ ನೀಡಿದ್ದಾರೆ. ಅದಲ್ಲದೇ ಹರ್ಷ ಶುಗರ್ಸ್ ನಾಲ್ಕೈದು ಎಕರೆ ಜಾಗೆ ನೀಡಿದರೆ ನೂರಾರು ಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.
ಮೂರು ಸಾವಿರ ಜನರು ಊಟ ಮಾಡಲು ಸರಕಾರದ ವತಿಯಿಂದಲೇ ದಾಸೋಹ ಭವನ ನಿರ್ಮಿಸಿಕೊಡಬೇಕು ಎಂದು ಎಚ್.ಕೆ.ಪಾಟೀಲ ಒತ್ತಾಯಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಭಕ್ತಾಧಿಗಳು ಪಡ್ಡಲಗಿ ತುಂಬಿಸಿ ಜೋಗತಿಯರಿಗೆ ನೈವೇದ್ಯ ಸಮರ್ಪಿಸುತ್ತಾರೆ. ಜನಸಂದಣಿ ಹೆಚ್ಚಾಗಿರುವಾಗ ದರ್ಶನ ಸಾಧ್ಯವಾಗುತ್ತಿಲ್ಲ; ಆದ್ದರಿಂದ ಎಲ್ಲರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು. ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಸರಕಾರದ ವತಿಯಿಂದ 25 ಕೋಟಿ ರೂಪಾಯಿ ನೀಡುವಂತೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಸುಕ್ಷೇತ್ರ ಯಲ್ಲಮ್ಮನ ಗುಡ್ಡದ ಸಮಗ್ರ ಅಭಿವೃದ್ಧಿ ಯೋಜನೆಯ ರೂಪುರೇಷೆಗಳನ್ನು ಸಭೆಯಲ್ಲಿ ವಿವರಿಸಿದರು. ಗೌರಿ ಹುಣ್ಣಿಮೆ, ಹೊಸ್ತಿಲ ಹುಣ್ಣಿಮೆ, ಬನದ ಹುಣ್ಣಿಮೆ ಹಾಗೂ ಭರತ ಹುಣ್ಣಿಮೆ ಸೇರಿ ಒಟ್ಟಾರೆ ಕೋಟ್ಯಂತರ ಜನರು ಭೇಟಿ ನೀಡುತ್ತಾರೆ ಎಂದರು.
ಸುಗಮ ದರ್ಶನ ಹಾಗೂ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಯೋಜನೆಯನ್ನು ರೂಪಿಸಲಾಗಿದೆ.
ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳ ಭಕ್ತಾಧಿಗಳ ಅನುಕೂಲಕ್ಕಾಗಿ ಸರದಿ ಕಾಂಪ್ಲೆಕ್ಸ್(ಕ್ಯೂ ಕಾಂಪ್ಲೆಕ್ಸ್), ಅಲ್ಲಿಯೇ ಲಘು ಉಪಾಹಾರ ನೀಡಲು ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಪಡ್ಡಲಗಿ ತುಂಬಲು ನಾಲ್ಕೈದು ಸಾವಿರ ಜನರು ಒಂದೇ ಕಡೆ ಅಡುಗೆ ಮಾಡಲು ಕೊಠಡಿಗಳು; ಎಣ್ಣೆಹೊಂಡದಲ್ಲೂ ಕೂಡ ಸರದಿ ವ್ಯವಸ್ಥೆ ಹಾಗೂ ರಾಮೇಶ್ವರಂ ಮಾದರಿಯಲ್ಲಿ ಮೇಲಿನಿಂದ ನೀರಿನ ಸಿಂಪರಣೆ ಹಾಗೂ ಸ್ನಾನದ ಬಳಿಕ ಬಟ್ಟೆ ಬದಲಾಯಿಸಲು ಕೂಡ ವ್ಯವಸ್ಥೆ ಮಾಡುವ ಯೋಜನೆಯನ್ನು ಜಿಲ್ಲಾಧಿಕಾರಿ ರೋಷನ್ ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಹುಣ್ಣಿಮೆ ಸಂದರ್ಭದಲ್ಲಿ ಜನದಟ್ಟಣೆ ಹಾಗೂ ಸುಗಮ ಸಂಚಾರ ನಿರ್ವಹಣೆಗೆಇಂಟ್ರಾನೆಟ್ ವಾಕಿಟಾಕಿ ವ್ಯವಸ್ಥೆ ಅಗತ್ಯವಿರುತ್ತದೆ ಎಂದು ವಿವರಿಸಿದರು. ಮುಜರಾಯಿ ಹಾಗೂ ಸಾರಿಗೆ ಇಲಾಖೆಯ ಸಚಿವರಾದ ರಾಮಲಿಂಗಾ ರೆಡ್ಡಿ, ವಾಯವ್ಯ ಸಾರಿಗೆ ನಿಗಮ ನಿಯಮಿತ ಅಧ್ಯಕ್ಷರಾದ ಭರಮಗೌಡ ಕಾಗೆ, ಶಾಸಕರಾದ ವಿಶ್ವಾಸ್ ವೈದ್ಯ, ಬಾಬಾಸಾಹೇಬ್ ಪಾಟೀಲ, ಆಸಿಫ್(ರಾಜು) ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೆ.ವಿ.ರಾಜೇಂದ್ರ, ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
13th October 2024
ಶಕ್ತಿ ದೇವತೆ ರೇಣುಕಾ ಯಲ್ಲಮ್ಮನ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ..
ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಅವರಿಂದ ಚಾಲನೆ..
ಬೆಳಗಾವಿ : ರಾಜ್ಯ ಹಾಗೂ ಹೊರರಾಜ್ಯಗಳ ಭಕ್ತರ ಇಷ್ಟಾರ್ಥಗಳನ್ನು ತಪ್ಪದೇ ಈಡೇರಿಸುವ ಶಕ್ತಿ ದೇವತೆ, ಎಳು ಕೊಳ್ಳದ ಯಲ್ಲಮ್ಮ ದೇವಿಯ ದರ್ಶನವನ್ನು ಇಂದು ಭಾನುವಾರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಇತರ ಸಚಿವರು ಪಡೆದುಕೊಂಡಿದ್ದಾರೆ..
ಹುಬ್ಬಳ್ಳಿಯಿಂದ ರಸ್ತೆ ಮೂಲಕ ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿದ ಸಿಎಂ ಮತ್ತು ತಂಡ, ರೇಣುಕಾದೇವಿಯ ದರ್ಶನ ಪಡೆದು, ಅವರ ನೇತೃತ್ವದಲ್ಲಿ ರೇಣುಕಾದೇವಿ ಪ್ರವಾಸೋಧ್ಯಮ ಅಭಿವೃದ್ಧಿ ಮಂಡಳಿ ಹಾಗೂ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆಯನ್ನು ನಡೆಸಿದ್ದು ಅಭಿವೃದ್ಧಿ ದೃಷ್ಟಿಯಿಂದ ಮಹತ್ತರ ಚರ್ಚೆ ನಡೆಸಿದ್ದಾರೆ.
ರೇಣುಕಾ ದೇವಿ ದೇವಸ್ಥಾನದ ಉನ್ನತಿಕರಣಕ್ಕಾಗಿ ಬೆಳಗಾವಿ ಜಿಲ್ಲಾಡಳಿತದಿಂದ ಒಂದು ಯೋಜನೆ ರಚಿಸಲ್ಪಟ್ಟಿದ್ದು, ಆ ಯೋಜನೆಯ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದ್ದು ಸರ್ಕಾರದ ಮುಂದಿನ ನಿರ್ದೇಶನದಂತೆ ಚಾಲನೆಗೊಳ್ಳಲಿದೆ.
ಸಭೆಯ ನಂತರ ದೇವಸ್ಥಾನದ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಹಾಗೂ ಸಚಿವರ ತಂಡ ಚಾಲನೆ ನೀಡುತ್ತಿದ್ದು, ಈ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಪ್ರವಾಸೋಧ್ಯಮ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸ್ಥಳೀಯ ಶಾಸಕ ವಿಶ್ವಾಸ ವೈದ್ಯ, ಮತ್ತಿತರರು ಉಪಸ್ಥಿತರಿದ್ದರು..
8th October 2024
ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತವಾರಿ ಸಮಿತಿ ಸಭೆ
-------------------------------------
ನೆರೆ ಹಾನಿ: ಬೆಳೆ ಪರಿಹಾರ ವಿತರಣೆಗೆ ವಿಳಂಬ ಬೇಡ; ರಸ್ತೆ, ಸೇತುವೆ ದುರಸ್ತಿಗೆ ಕ್ರಮವಹಿಸಿ: ಸಂಸದ ಜಗದೀಶ ಶೆಟ್ಟರ್
ಬೆಳಗಾವಿ, ಜಿಲ್ಲೆಯಲ್ಲಿಅತೀವೃಷ್ಟಿಯಿಂದ ಹಾನಿಗೊಳಗಾದ ಪ್ರತಿಯೊಬ್ಬ ರೈತರಿಗೂ ಬೆಳೆ ಪರಿಹಾರ ಒದಗಿಸಬೇಕು. ಜಂಟಿ ಸಮೀಕ್ಷೆಯಲ್ಲಿ ದಾಖಲಾಗದೇ ಇರುವಂತಹ ರೈತರನ್ನು ಗುರುತಿಸಿ ಅವರಿಗೂ ಸಹ ಪರಿಹಾರ ಒದಗಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಜಗದೀಶ ಶೆಟ್ಟರ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ) ಜರುಗಿದ 2024-25ನೇ ಸಾಲಿನ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳೆ ಪರಿಹಾರ ಕಾರ್ಯದಲ್ಲಿ ಜಂಟಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿ ಆದಷ್ಟು ಬೇಗನೆ ರೈತರಿಗೆ ಬೆಳೆ ಪರಿಹಾರ ಒದಗಿಸಲು ಕ್ರಮ ಜರುಗಿಸಿ, ನೆರೆ ಹಾವಳಿಯಿಂದಾಗಿ ಹಾನಿಗೊಳಗಾದ ರಸ್ತೆ, ಸೇತುವೆಗಳ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಹೇಳಿದರು.
ಬೆಂಬಲ ಬೆಳೆ ಖರೀದಿ ಕೇಂದ್ರಗಳಲ್ಲಿ ಖರಿದಿಸಲು ಗುರುತಿಸಲಾದ ಬೆಳೆಗಳ ಖರೀದಿ ಪ್ರಕ್ರಿಯೆಯನ್ನು ಕೂಡಲೆ ಪ್ರಾರಂಭಿಸಬೇಕು.
ಮಹಾನಗರ ಪಾಲಿಕೆಯ ಅಮೃತ ಯೋಜನೆ 1 ಹಾಗೂ 2 ರ ಯೋಜನೆಯಡಿ ನಿವೇಶನ ಹಂಚಿಕೆ ಕುರಿತು ಸಲ್ಲಿಸಲಾಗುವ ಪ್ರಸ್ತಾವನೆಗಳನ್ನು ಮಾರ್ಗಸೂಚಿಗಳನ್ವಯ ಸಿದ್ಧಪಡಿಸಿ ಕಳುಹಿಸಿಕೊಡುವದರ ಜೊತೆಗೆ ಪ್ರಸ್ತಾವನೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸುವಂತೆ ತಿಳಿಸಿದರು.
ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದಂತಹ ಫಲಾನುಭವಿಗಳಿಗೆ ಸೂಕ್ತವಾದ ತಿಳಿವಳಿಕೆ ನೀಡಬೇಕು. ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಜಿ+3 ಮಾದರಿ ಮನೆಗಳ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಬೇಕು. ಸರಕಾರದಿಂದ ಜಾರಿಯಲ್ಲಿರುವ ವಿವಿಧ ವಸತಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದಂತಹ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಿ ಬಡ ಜನರಿಗೆ ಅನುಕೂಲ ಮಾಡಿಕೊಡಬೇಕು.
ಬೆಳಗಾವಿಯ ತರಕಾರಿ ಹಾಗೂ ಹಣ್ಣುಗಳಿಗೆ ತುಂಬಾ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಹಾಗೂ ವರ್ತಕರೊಂದಿಗೆ ಸಭೆ ಜರುಗಿಸಿ ಬೆಳಗಾವಿಯ ತರಕಾರಿ ಹಾಗೂ ಹಣ್ಣುಗಳ ಮಾರುಕಟ್ಟೆಯನ್ನು ವಿಸ್ತರಿಸಲು ಗಮನ ಹರಿಸಬೇಕು. ಇದರ ಜೊತೆಗೆ ಶೀಥಿಲ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡುವದರ ಜೊತೆಗೆ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ಜರುಗಿಸಿ ಜಿಲ್ಲೆಯ ಪ್ರಮುಖ ಕೃಷಿ, ತೋಟಗಾರಿಕೆ ಬೆಳೆ, ಹೂವು ಹಾಗೂ ಹಣ್ಣುಗಳ ಉತ್ಪಾದನೆಯ ಅಂಕಿ ಅಂಶಗಳನ್ನು ನೀಡಲು ತಿಳಿಸಿದರು.
ಜಿಲ್ಲೆಯನ್ನು ಶೈಕ್ಷಣಿಕವಾಗಿ ಹಾಗೂ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ಸರ್ವ ಪ್ರಯತ್ನ ಮಾಡಬೇಕು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಫಲಿತಾಂಶ ಸುಧಾರಣೆಗೆ ಗಮನ ಹರಿಸಬೇಕು ಎಂದರು
ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಕೂಲಿಕಾರ್ಮಿಕರಿಗೆ ಕಾಲಮಿತಿಯೊಳಗಾಗಿಯೇ ಕೂಲಿ ವೇತನ ಪಾವತಿಸಬೇಕು. ಜಲ ಜೀವನಮಿಷನ ಯೋಜನೆಯಡಿ ಪ್ರತಿ ಮನೆಗೂ ನೀರು ಸರಬರಾಜು ಆಗುತ್ತಿರುವ ಕುರಿತು ಪರಿಶೀಲಿಸಿ ವರದಿ ನೀಡಲು ತಿಳಿಸಿದರು. ಕಿತ್ತೂರ ಕೈಗಾರಿಕಾ ಪ್ರದೇಶದ ಬಗ್ಗೆ ಮಾಹಿತಿ ಪಡೆದು ಕೈಗಾರಿಕಾ ಪ್ರದೇಶ ಅಭಿವೃದ್ದಿಗಾಗಿ ಬೇಕಾದಂತಹ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಜರುಗಿಸು ದರ ಮೂಲಕ ಜಿಲ್ಲೆಯಲ್ಲಿ ಕೈಗಾರಿಕೊದ್ಯಮ ಉತ್ತೇಜಿಸಲು ಶೆಟ್ಟರ್ ತಿಳಿಸಿದರು.
ಶಿಷ್ಟಾಚಾರ ಉಲ್ಲಂಘಿಸಿದರೆ ಕ್ರಮ-ಎಚ್ಚರಿಕೆ:
ಕೇಂದ್ರ ಪುರಸ್ಕೃತ ಯೋಜನೆಗಳ ಯಾವುದೇ ಕಾಮಗಾರಿಗಳ ಪ್ರಾರಂಭಕ್ಕೂ ಮುನ್ನ ಸಂಬಂಧಿಸಿದ ಲೋಕಸಭಾ ಸದಸ್ಯರ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಂಸದ ಜಗದೀಶ್ ಶೆಟ್ಟರ ಅವರು, ಶಿಷ್ಟಾಚಾರ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದ ಎಚ್ಚರಿಸಿದರು.
ಅಧಿಕಾರಿಗಳು ಸಭೆಗೆ ಬರುವದಕ್ಕೂ ಮುಂಚೆ ತಮ್ಮ ಇಲಾಖೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗುವಂತೆ ಸಂಸದರಾದ ಜಗದೀಶ ಶೆಟ್ಟರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಮಾತನಾಡಿ, ಪ್ರವಾಹದ ಸಂದರ್ಭದಲ್ಲಿ ಕೆಲ ಪ್ರದೇಶಗಳಲ್ಲಿ ಗೋಶಾಲೆಗಳನ್ನು ತೆರೆಯದೇ ಜಾನುವಾರುಗಳಿಗೆ ಮೇವು ಪೂರೈಕೆ ಮಾಡದೆ ಇರುವ ಕುರಿತು ದೂರುಗಳು ಬಂದಿರುವ ಕುರಿತು ಸಭೆಯ ಗಮನಕ್ಕೆ ತಂದರು.
ಗೋಕಾಕ ಹಾಗೂ ಮೂಡಲಗಿ ಭಾಗದಲ್ಲಿ ಸೊಯಾಬಿನ್ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ತಿಳಿಸಿದರು. ವಿಕಲಚೇತನರ ಇಲಾಖೆಯಿಂದ ವಿತರಿಸಲಾಗುವ ತ್ರಿಚಕ್ರ ವಾಹನಗಳ ವಿತರಣೆಗೆ ಕ್ರಮ ಜರುಗಿಸಬೇಕು.
ಗ್ರಾಮೀಣ ಪ್ರದೇಶಗಳಲ್ಲಿನ ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರನ್ನು ಭರ್ತಿಮಾಡಬೇಕು. ಹೊಸದಾಗಿ ನಿರ್ಮಾಣಗೊಂಡಂತಹ ಸರಕಾರಿ ಆಸ್ಪತ್ರೆಗಳ ಉದ್ಘಾಟನೆಗೂ ಮುಂಚೆಯೇ ಆಸ್ಪತ್ರೆಗೆ ಬೇಕಾದಂತಹ ವೈದ್ಯರು, ಸಿಬ್ಬಂದಿಗಳ ನೇಮಕ ಹಾಗೂ ಆಸ್ಪತ್ರೆಗೆ ಬೇಕಾದಂತಹ ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಂಡು ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲು ತಿಳಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಅತೀವೃಷ್ಟಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ಪೂರ್ಣಗೊಂಡಿದ್ದು ಪರಿಹಾರ ಪಡೆಯುವವರ ವಿವರಗಳನ್ನು ಆಯಾ ಗ್ರಾಮಪಂಚಾಯತ ಹಾಗೂ ಕೃಷಿ ಕೇಂದ್ರಗಳಲ್ಲಿ ಪ್ರಚುರ ಪಡಿಸಿದ್ದು ಈ ಕುರಿತು ಆಕ್ಷೇಪಣೆಗಳಿದ್ದರೆ ಅವುಗಳನ್ನು ಸರಿಪಡಿಸಿ ಅಂತಿಮ ಯಾದಿಯನ್ನು ತಯಾರಿಸಲಾಗುವದು ಎಂದರು.
ಶೀಘ್ರದಲ್ಲಿಯೇ ಸರಕಾರದ ಮಾರ್ಗಸೂಚಿಗಳನ್ವಯ ರೈತರಿಗೆ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದರು.
ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ದೋಣಿಗಳ ಅವಶ್ಯಕತೆ ಇರುವದು ಎಂದು ಅಧ್ಯಕ್ಷರ ಗಮನಕ್ಕೆ ತಂದು, ನೆರೆ ಹಾವಳಿಯಿಂದ ಹಾನಿಗೊಳಗಾದ ರಸ್ತೆ, ಶಾಲಾ, ಅಂಗನವಾಡಿ ಕಟ್ಟಡಗಳ ದುರಸ್ತಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳನ್ವಯ ಅನುದಾನ ಬಿಡುಗಡೆ ಮಾಡಿ ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತಿ ಸಿ.ಇ.ಓ. ರಾಹುಲ್ ಶಿಂಧೆ ಅವರು ಸಭೆಯನ್ನು ನಿರ್ವಹಿಸಿದರು.
ಚಿಕ್ಕೋಡಿ ಲೋಕಸಭಾ ಸದಸ್ಯೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ರಾಜು (ಆಸೀಫ್) ಸೇಠ್, ವಿಠ್ಠಲ ಹಲಗೇಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
****
8th October 2024
ಚನ್ನಮ್ಮನ ಕಿತ್ತೂರು ಉತ್ಸವ-2024: ಪೂರ್ವಭಾವಿ ಸಭೆ
-----------------------------------
ಅದ್ದೂರಿ ಉತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಶಾಸಕ ಬಾಬಾಸಾಹೇಬ ಪಾಟೀಲ ಸೂಚನೆ
ಬೆಳಗಾವಿ, ಅ.7 ಚೆನ್ನಮ್ಮನ ಕಿತ್ತೂರು ಉತ್ಸವ-2024 ಹಾಗೂ ಚನ್ನಮ್ಮನವರ 200 ನೇ ವಿಜಯೋತ್ಸವ ಕಾರ್ಯಕ್ರಮವನ್ನು ಅಚ್ವುಕಟ್ಟಾಗಿ ಆಯೋಜಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲ ಉಪ ಸಮಿತಿಗಳ ಸದಸ್ಯರು ಮತ್ತು ಅಧಿಕಾರಿಗಳು ಶ್ರಮಿಸಬೇಕು ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ತಿಳಿಸಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ (ಅ.7) ಜರುಗಿದ ಚನ್ನಮ್ಮನ ಕಿತ್ತೂರು ಉತ್ಸವ-2024 ಮತ್ತು ಚನ್ನಮ್ಮನವರ 200ನೇ ವಿಜಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚನ್ನಮ್ಮನ ಕಿತ್ತೂರು ಉತ್ಸವ-2024 ಕಾರ್ಯಕ್ರಮ ಯಶಸ್ವಿಗಾಗಿ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಪ್ರಸಕ್ತ ಸಾಲಿನ ಉತ್ಸವವನ್ನು ಯಾವುದೇ ರೀತಿಯ ಲೋಪಗಳಾಗದಂತೆ ಯಶಸ್ವಿಯಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಮೂರು ದಿನಗಳ ಕಾಲ ಜರುಗಲಿರುವ ಉತ್ಸವದ ದಿನಗಳಂದು ಆಗಮಿಸುವ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೆ ಕೊರತೆ ಆಗಬಾರದು.
ಉತ್ಸವದ ಮೊದಲನೇ ದಿನ ಜರುಗಲಿರುವ ಮೆರವಣಿಗೆಯಲ್ಲಿ ಸಾಗುವ ಕಲಾವಿದರು, ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
ಕಾರ್ಯಕ್ರಮಗಳ ದಿನದಂದು ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ಯಾವುದೇ ಗೊಂದಲಗಳು ಆಗಬಾರದು. ರಾಷ್ಟ್ರೀಯ/ರಾಜ್ಯಮಟ್ಟದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರುಗಳಿಗೆ ವೇದಿಕೆ ದೊರೆಯುವ ಹಾಗೆ ರೂಪುರೇಷೆಗಳನ್ನು ತಯಾರಿಸಲು ತಿಳಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ, ಕಿತ್ತೂರು ಉತ್ಸವ-2024 ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ರಚಿಸಲಾದ ವಿವಿಧ ಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯವ್ಯಕ್ತಿಗಳ ವಸತಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಗಣ್ಯವ್ಯಕ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಆಗಮಿಸುವ ಕಲಾತಂಡಗಳಿಗೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು.
ಮೂರು ದಿನಗಳ ಕಾಲ ಜರುಗಲಿರುವ ಚನ್ನಮ್ಮನ ಕಿತ್ತೂರು ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಮಾತನಾಡಿ, ಉತ್ಸವದ ದಿನಗಳಂದು ಸೂಕ್ತ ಪೊಲಿಸ್ ಬಂದೋಬಸ್ತ ಮಾಡಲಾಗುವುದು ಎಂದರು.
ಉತ್ಸವದ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮುಖ್ಯ ವೇದಿಕೆ ಸ್ಥಳಗಳಲ್ಲಿ ಪೋಲಿಸ್ ಭದ್ರತೆ ಒದಗಿಸಲಾಗುವದು. ಅಲ್ಲದೇ ಉತ್ಸವದ ಭದ್ರತೆಗೆ ಆಗಮಿಸುವ ಪೊಲಿಸ್ ಸಿಬ್ಬಂದಿಗಳಿಗೆ ವಸತಿ ಹಾಗೂ ಊಟೊಪಚಾರದ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಮೆರವಣಿಗೆ, ರೂಪಕಗಳು, ಏರ್ ಶೋ, ಸಾರಿಗೆ, ಗ್ರಾಮೀಣ ಕ್ರೀಡೆ, ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿ, ಜಲ ಕ್ರೀಡೆಗಳ ಆಯೋಜನೆ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಸೇರಿದಂತೆ ವಿವಿಧ ಉಪ ಸಮಿತಿಗಳ ಮುಖ್ಯಸ್ಥರು ಇದುವರೆಗೆ ಕೈಗೊಂಡಿರುವ ಸಿದ್ಧತೆಗಳ ಕುರಿತು ವಿವರಿಸಿದರು.
ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
****
7th October 2024
ಸವದತ್ತಿ ಯಲ್ಲಮ್ಮದೇವಿಯ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್..
ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕ ವಿಶ್ವಾಸ ವೈದ್ಯರ ಜೊತೆ ಚರ್ಚೆ..
ಬೆಳಗಾವಿ : ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೋಮವಾರ (ಅ.7) ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದಾರೆ.
ಇದಾದ ಬಳಿಕ ಸವದತ್ತಿ ಯಲ್ಲಮ್ಮ ಸುಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಸವದತ್ತಿ ಶಾಸಕರಾದ ವಿಶ್ವಾಸ್ ವೈದ್ಯ ಅವರ ಜತೆ ಚರ್ಚಿಸಿದ್ದು, ಶಾಸಕರು ಪುಣ್ಯಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸುದೀರ್ಘವಾದ ಮಾಹಿತಿ ನೀಡಿದ್ದಾರೆ.
ಈ ವೇಳೆ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಭೀಮಾಶಂಕರ ಗುಳೇದ ಸ್ಥಳೀಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.