
8th January 2025
ಮಂಡ್ಯ: ದೇಸಿ ಗೋ ತಳಿಗಳ ಬಗ್ಗೆ ಪ್ರಚಾರ ನೀಡುವ ಸಲುವಾಗಿ ರಾಜ್ಯದಲ್ಲಿ ನಂದಿ ರಥಯಾತ್ರೆ ನಡೆಯುತ್ತಿದ್ದು, ಮಾಚ್ ೦೩, ೦೪, ೦೫ರಂದು ಮಂಡ್ಯ ಜಿಲ್ಲೆಯಲ್ಲಿ ಯಾತ್ರೆ ಸಂಚರಿಸಲಿದೆ. ಇದರ ಅಂಗವಾಗಿ ಜನವರಿ ೧೨ರಂದು ಸಂಜೆ ೦೪ಕ್ಕೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ನಂದಿಗಳ ಭವ್ಯ ಮೆರವಣಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಲಕ್ಷ್ಮಿ ಗೋಮಾತಾ ಮಂದಿರದ ಸಂಸ್ಥಾಪಕ ಹಾಗೂ ನಾಗಮಂಗಲ ಗೋ ಸೇವಾ ಪ್ರಮುಖ್ ಶಶಿಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಗಿಡ್ಡ ಸಂರಕ್ಷಣ ಮತ್ತು ಸಂವರ್ಧನ ಆಶ್ರಯದಲ್ಲಿ, ಗೋ ಸೇವಾ ಗತಿವಿಧಿಯ ಸಹಕಾರದಿಂದ ಶ್ರೀ ಲಕ್ಷ್ಮಿ ಗೋಮಾತಾ ಮಂದಿರ ಪಂಚಗವ್ಯ ಉತ್ಪನ್ನ ಕೇಂದ್ರದ ನೇತೃತ್ವದಲ್ಲಿ ನಂದಿಯಾತ್ರೆ ನಡೆಯುತ್ತಿದ್ದು, ಗೃಹ ಬಳಕೆಯ ಗವ್ಯೊತ್ಪನ್ನಗಳ ತಯಾರಿಕೆಯ ತರಬೇತಿ ನೀಡುವ ಉದ್ದೇಶ ಹೊಂದಿದ್ದು, ದೇಶಿ ಗೋ ತಳಿಗಳನ್ನು ಉಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಜನವರಿ ೧೨ರಂದು ಬಿಂಡಿಗನವಿಲೆ ಗ್ರಾಮದಲ್ಲಿ ನಂದಿಗಳ ಭವ್ಯ ಮೆರವಣಿಗೆ ಜತೆಗೆ ವಿಷ್ಣು ಸಹಸ್ರನಾಮ ಪಟಣ ಮತ್ತು ಅಗ್ನಿಹೋತ್ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಲೆನಾಡು ಗಿಡ್ಡ ಗವ್ಯೋತ್ಪನ್ನ ಸಹಕಾರ ಸಂಘವನ್ನು ಉದ್ಘಾಟಿಸಲಾಗುವುದು ಎಂದು ಹೇಳಿದರು.
ಗೋ ಸಂರಕ್ಷಣಾ ಸಮಿತಿಯ ರಾಜ್ಯ ಸಂಚಾಲಕ ಮಳವಳ್ಳಿ ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರ, ಪಶು ಇಲಾಖೆ, ಸಂಘ ಸಂಸ್ಥೆಗಳು ಪ್ರಾಂತೀಯ ತಳಿಗಳ ಬಗ್ಗೆ ಆಸಕ್ತಿ ತೋರದೇ ಕ್ಷೀರ ಕ್ರಾಂತಿಯ ಬದಲಿಗೆ ರೋಗ ಕ್ರಾಂತಿ ಪ್ರಾರಂಭವಾಗಿದೆ. ಸದರಿ ತಳಿಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ದೇಶಿ ಹಾಗೂ ಪ್ರಾಂತೀಯ ತಳಿಗಳ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಸೇರಿಸುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬಜರಂಗ ಸೇನೆಯ ಮಂಜುನಾಥ್ ಇದ್ದರು.
6th January 2025
ಮಂಡ್ಯ: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕರ್ನಾಟಕ ಸಂಘ ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ ೦೯ ರಿಂದ ೧೧ ರವರೆಗೆ ಮೂರು ದಿನಗಳ ಕಾಲ ಕೆ.ವಿ. ಶಂಕರಗೌಡ ನೆನಪಿನ ವಿಭಾಗೀಯ ಮಟ್ಟದ ನಾಟಕೋತ್ಸವ ನಗರದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಘ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ ೯ ರಂದು ಮಧ್ಯಾಹ್ನ ೩.೦೦ ಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನಾಟಕೋತ್ಸವ ಉದ್ಘಾಟಿಸುವರು. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ಭಾಗವಹಿಸುವರು ಎಂದು ಹೇಳಿದರು.
ಸಂಜೆ ೬:೦೦ ಗಂಟೆಗೆ ನಟರಾಜ್ ಹೊನ್ನವಳ್ಳಿ ಅವರ ರಂಗರೂಪ ಮತ್ತು ನಿರ್ದೇಶನದಲ್ಲಿ ಬೆಂಗಳೂರಿನ ಸಮುದಾಯ ರಂಗ ತಂಡ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ 'ಜುಗಾರಿ ಕ್ರಾಸ್' ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಜನವರಿ ೧೦ ರ ಶುಕ್ರವಾರ ಸಂಜೆ ೫ ಗಂಟೆಗೆ ಮುಖ್ಯ ಅತಿಥಿಗಳಾದ ಜನತಾ ಶಿಕ್ಷಣ ಟ್ರಸ್ಟ್ ನಿರ್ದೇಶಕ ಡಾ.ರಾಮಲಿಂಗಯ್ಯ, ಮಂಡ್ಯ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಜಿ.ಪಿ. ಭಕ್ತವತ್ಸಲ, ಆಯುಕ್ತ ಡಾ.ಹೆಚ್.ಅನಿಲ್ ಕುಮಾರ್ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಡಾ.ಜಾಹಿದಾ.ಎಂ.ಎ, ರಂಗ ಸಂಘಟಕ ಕುವೆಂಪು ಪ್ರಕಾಶ್ ಉಪಸ್ಥಿತಿಯಲ್ಲಿ, ಬಿ.ಎಂ.ಶಶಿಕಲಾ ರಂಗರೂಪ ಮತ್ತು ನಿರ್ದೇಶನದಲ್ಲಿ ಮೈಸೂರಿನ ಶಶಿ ಥಿಯೇಟರ್‌ನ ಕಲಾವಿದರು ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ `ಉರಿಯ ಉಯ್ಯಾಲೆ' ನಾಟಕ ಪ್ರಸ್ತುತಪಡಿಸುವರು ಎಂದು ತಿಳಿಸಿದರು.
ಜನವರಿ ೧೧ ರ ಮಧ್ಯಾಹ್ನ ೩:೦೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಪೋಲಿಸ್ ಮಹಾನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಸಮಾರೋಪ ನುಡಿಗಳನ್ನಾಡಲಿದ್ದು, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಭಾಗವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಜಿಲ್ಲೆಯ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಉಪಸ್ಥಿತರಲಿದ್ದು, ಕಾಳೇನಹಳ್ಳಿಯ ಹಿರಿಯ ಕಲಾವಿದ ಟಿ.ಕೆಂಚೇಗೌಡ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಸಂಜೆ ೪:೦೦ ಗಂಟೆಗೆ ಕಾರಸವಾಡಿ ಸುರೇಶ್ ಅವರ ಸಂಗೀತ ಮತ್ತು ನಿರ್ದೇಶನದಲ್ಲಿ `ಗದಾಯುದ್ಧ' ಪೌರಾಣಿಕ ನಾಟಕವನ್ನು ಮಾಂಡವ್ಯ ಕಲಾ ಟ್ರಸ್ಟ್ ಪ್ರಸ್ತುತಪಡಿಸಲಿದೆ ಎಂದು ವಿವರಿಸಿದರು.
ನಾಟಕ ಅಕಾಡೆಮಿ ಸದಸ್ಯ ಹಾಗೂ ನಾಟಕೋತ್ಸವದ ಸಂಚಾಲಕ ಜಿಪಿಒ ಎ.ಎಸ್.ಚಂದ್ರಶೇಖರ್ ಮಾತನಾಡಿ, ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ರಂಗಮಂದಿರದಲ್ಲಿ ಆಯೋಜಿಸಲಾಗಿರುವ ನಾಟಕಗಳಿಗೆ ಉಚಿತ ಪ್ರವೇಶವಿದ್ದು, ಕಲಾಪ್ರೇಮಿಗಳು, ಯುವಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ವೇಳೆ ನಾಟಕೋತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಗೋಷ್ಠಿಯಲ್ಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಸೋಮಶೇಖರ್ ಇದ್ದರು.
4th December 2024
ಹಲಗೂರು: ಹಲಗೂರು ಹೋಬಳಿಯ ಗ್ರಾಮ ಪಂಚಾಯಿತಿಗಳಾದ ನಿಟ್ಟೂರು,ಲಿಂಗಪಟ್ಟಣ್ಣ,ಡಿ.ಕೆ.ಹಳ್ಳಿ,
ಹೆಚ್.ಬಸಾಪುರ,ಬ್ಯಾಡರಹಳ್ಳಿ, ತೊರೆಕಾಡನಹಳ್ಳಿ ,ಹಲಗೂರು ಹಾಗೂ ಕಸಬ ಹೋಬಳಿಯ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು.
ಇಂದು ಬೆಳಿಗ್ಗೆ ಹಲಗೂರು ಗ್ರಾಮ ಪಂಚಾಯಿ ಬಳಿ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂಧಿಗಳು , ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಕನ್ನಡ ಅಭಿಮಾನಿಗಳು ನಾಡ ದೇವಿ ಭುವನೇಶ್ವರಿ ದೇವಿಗೆ ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ.ಆರ್.ಶ್ರೀನಿವಾಸಚಾರಿ ಪುಷ್ಪಾರ್ಚನೆ ಮಾಡುವ ಮೂಲಕ ಭವ್ಯ ಸ್ವಾಗತ ಕೋರಲಾಯಿತು.ಹಲಗೂರಿನ ಪ್ರಮುಖ ಬೀದಿಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಥವು ಸಂಚರಿಸಿತು.ಹಲಗೂರಿನ ಮುಖ್ಯ ವೃತ್ತದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ರಥದ ಪ್ರಚಾರ ಕಲಾ ತಂಡದ ಕನ್ನಡ ನಾಡು ನುಡಿಗೆ ಸಂಬಂಧಿಸಿದ ನೃತ್ಯ ರೂಪಕವನ್ನ ಕಲಾವಿದರು ಪ್ರದರ್ಶಿದರು.
ಇದೇ ವೇಳೆ ಮಾತಾನಾಡಿದ ಅವರು ಕನ್ನಡ ಸಾಹಿತ್ಯ ಸಮ್ಮೇಳನ ಕಳೆದ ಮೂವತ್ತು ವರ್ಷಗಳ ನಂತರ ನಮ್ಮ ಜಿಲ್ಲೆಯಲ್ಲಿ ಮತ್ತೊಮ್ಮೆ ಮಾಡಿರುವುದು ಬಹಳ ಹೆಮ್ಮೆಯ ವಿಚಾರ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗೊ.ರು.ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಜರುಗಲಿದ್ದು ಕನ್ನಡ ಜಾತ್ರೆಯನ್ನ ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕರು ಮತ್ತು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಡಿ.ರಾಮು ಮಾತಾನಾಡಿದ ಅವರು ಇದೆ ಡಿ.20,21,22 ಮಂಡ್ಯ ಜಿಲ್ಲೆಯಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿರುವ ಪ್ರಯುಕ್ತವಾಗಿ ಹಲಗೂರು ಹೋಬಳಿಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯುಲ್ಲಿ 87 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಥಕ್ಕೆ ಹೋಬಳಿಯ ಎಲ್ಲಾ ಕನ್ನಡ ಅಭಿಮಾನಿಗಳು ಅದ್ದೂರಿ ಸ್ವಾಗತವನ್ನ ಕೋರಲಾಯಿತು.ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಹಬ್ಬದಲ್ಲಿ ಭಾಗವಹಿಸ ಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲಾ ಉಪ್ಯಾಧ್ಯಕ್ಷ ದೇವರಾಜು ಕೊದೇನ ಕೊಪ್ಪಲು,
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಆರ್.ಶ್ರೀನಿವಾಸಚಾರಿ,ಉಪಾಧ್ಯಕ್ಷೆ ಲತಾ ಮಹದೇವ್,ಕಾರ್ಯದರ್ಶಿ ಶಿವಕುಮಾರ್. ಎನ್,
ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರವೀಶ್,ಗುಲ್ನಾಜ್ ಭಾನು,ಗ್ರಾಮ ಪಂಚಾಯಿತಿ
ಪಂಚಾಯತ್ ಎಸ್ ಡಿಎ ಮಂಜುನಾಥ್,ಬಿಲ್ ಕಲೆಕ್ಟರ್ ಆನಂದ,ಪಂಚಾಯತಿ ಸಿಬ್ಬಂಧಿಗಳಾದ ಶಿವನಂಜು,ಲಕ್ಷ್ಮಮ್ಮ,ಗಣೇಶ್,ಸಿಬಕತ್,ರಾಜನ್ ಹಾಗೂ ಪದ್ಮನಾಬ್,ಹೆಚ್.ವಿ ರಾಜಣ್ಣ,ಎನ್.ಕೆ.ಕುಮಾರ್,ಹೋಟೆಲ್ ಬಾಬು,
ಡಿ.ಎಲ್.ಮಾದೇಗೌಡ,ಗಂಗರಾಜು,ಮನೋಹರ್,ಎ.ವಿ.ಟಿ.ಕುಮಾರ್,ನವೀನ್,ಗಂಗಾಧರ್,ಕೃಷ್ಣ,
ಗಿರೀಶ್ ಕನ್ನಡ,ಶ್ರೀನಿವಾಸಚಾರಿ ಚಿಕ್ಕಮಾದು ಸೇರಿದಂತೆ ಇತರರು ಇದ್ದರು.