
8th January 2025
ನಾಗಮಂಗಲ: ಸಾಲಾದ್ರಿ ಶ್ರೀ ಕ್ಷೇತ್ರ ಕೋಟೆ ಬೆಟ್ಟದ ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ 18ನೇ ವರ್ಷದ ವೈಕುಂಠ ಏಕಾದಶಿ ಅದ್ದೂರಿ ಕಾರ್ಯಕ್ರಮ ಜರುಗಲಿದೆ.
ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಶ್ರೀ ಸಾಲಾದ್ರಿ ಶ್ರೀ ಕ್ಷೇತ್ರ ಕೋಟೆ ಬೆಟ್ಟ ಗ್ರಾಮದ ಶ್ರೀ ವೆಂಕಟರಮಣ ಸ್ವಾಮಿ 18ನೇ ವರ್ಷದ ವೈಕುಂಠ ಏಕಾದಶಿಯ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಲಿದ್ದು ಜನವರಿ 9 ಮತ್ತು 10 ಜರುಗಲಿದ್ದು ಭಕ್ತಾದಿಗಳು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ತಿಳಿಸಿದ್ದಾರೆ.
8th January 2025
ಮಂಡ್ಯ: ಭತ್ತ ಖರೀದಿ ಕೇಂದ್ರವನ್ನು ಶೀಘ್ರವಾಗಿ ತೆರೆಯದೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಧೋರಣೆ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಬಳಿ ಪ್ರತಿಭಟನೆ ಮಾಡಿದರು.
ಜಿಲ್ಲಾಧಿಕಾರಿ ಕಛೇರಿ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿ ಕಛೇರಿ ಎದುರು ಭತ್ತ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಭತ್ತ ಖರೀದಿ ಕೇಂದ್ರವನ್ನು ಜನವರಿ ತಿಂಗಳು ಬಂದರೂ ತೆರೆಯದೆ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಇದರಿಂದಾಗಿ ದಲ್ಲಾಳಿಗಳು ಕ್ವಿಂಟಾಲ್ ಭತ್ತವನ್ನು ೧೮೦೦ ರೂ. ನಿಂದ ೨೦೦೦ ರೂ.ಗೆ ಖರೀದಿ ಮಾಡುತ್ತಿದ್ದಾರೆ. ಈ ರೀತಿ ರೈತರ ಅಸಹಾಯಕತೆಯನ್ನು ದುರುಪಯೋಗಪಡಿಸಿ ಕೊಳ್ಳುವವರ ಮೇಲೆ ಕಾನೂನು ಕ್ರಮ ಜರುಗಿಸಲು ಜಿಲ್ಲಾಡಳಿತ ಹಾಗೂ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸುತ್ತದೆ.
ಭತ್ತ ಖರೀದಿ ಕೇಂದ್ರ ತೆರೆಯುವ ಸಲುವಾಗಿ ಭತ್ತ ಸಾಗಿಸಲು ಕ್ರೋನ್ಸ್ ಪೋರ್ಟ್ ಟೆಂಡರ್ ಸಹ ಕರೆದಿಲ್ಲ ಹಾಗೂ ಖರೀದಿಗೆ ಸಂಬಂಧಪಟ್ಟ ಸಾಪ್ಟವೇರ್ ಸಹ ತಯಾರಿಸಿಲ್ಲ. ಈ ಎಲ್ಲಾ ಬೆಳವಣಿಗಗಳನ್ನು ನೋಡಿದರೆ ರಾಜ್ಯ ಸರ್ಕಾರಕ್ಕೆ, ಭತ್ತ ಖರೀದಿ ಮಾಡಿ ರೈತರಿಗೆ ಸಹಾಯ ಮಾಡುವ ಮನಸ್ಥಿತಿ ಇಲ್ಲವಾಗಿದೆ ಎಂದೆನಿಸುತ್ತದೆ ಎಂದು ಸಂಶಯ ವ್ಯಕ್ತಪಡಿಸಿದರು.
ಕೇರಳದ ಎಡರಂಗ ಸರ್ಕಾರ ಭತ್ತ ಬೆಳೆಯಲು ರೈತರಿಗೆ ಎಕರೆಗೆ ೧೦,೦೦೦ ರೂ. ಪ್ರೋತ್ಸಾಹ ಧನ ಮತ್ತು ಕ್ವಿಂಟಾಲ್ ಭತ್ರಕ್ಕೆ ಬೆಂಬಲ ಬೆಲೆಯ ಜೊತೆಗೆ ಹೆಚ್ಚುವರಿಯಾಗಿ ೮೦೦ ರೂ.ಗಳನ್ನು ನೀಡುವುದರ ಮೂಲಕ ೩೧೦೦ ರೂಗೆ ಖರೀದಿ ಮಾಡುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಕ್ವಿಂಟಾಲ್ ಭತ್ತಕ್ಕೆ ೩೦೦೦ ರೂ. ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ಕೃಷಿ ಮಂತ್ರಿಗಳು ನಮ್ಮ ಜಿಲ್ಲೆಯವರೆ ಎಂಬ ಖುಷಿ ರೈತರಿಗೆ ಇತ್ತು ಆದರೆ ಕೃಷಿ ಮಂತ್ರಿಗಳು ಹುಸಿ ಮಂತ್ರಿಗಳಾಗಿದ್ದಾರೆ. ಅಕಾಲಿಕ ಮಳೆ ಬಂದು ಭತ್ತ ಬೆಳೆಗಾರರು ನಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ಜಿಲ್ಲಾಡಳಿತ ನಷ್ಠದ ವರದಿ ಪಡೆದುಕೊಂಡು ಸರ್ಕಾರಕ್ಕೆ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ಕೊಡಿಸಲಿಲ್ಲ ಎಂದು ದೂಡಿದರು.
ಕೂಡಲೇ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಶೀಘ್ರವಾಗಿ ಭತ್ತ ಖರೀದಿ ಕೇಂದ್ರವನ್ನು ತೆರೆಯಬೇಕು. ಕ್ವಿಂಟಾಲ್ ಭತ್ತಕ್ಕೆ ೩೦೦೦ ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು. ಕೇರಳದ ಎಡರಂಗ ಸರ್ಕಾರದ ಮಾದರಿಯಲ್ಲಿ ಎಕರೆಗೆ ೧೦,೦೦೦ ರೂ. ಪ್ರೋತ್ಸಾಹ ಧನ ಮತ್ತು ಹೆಚ್ಚುರಿಯಾಗಿ ಬೆಂಬಲ ಬೆಲೆಯ ಜೊತೆಗೆ ಕ್ರಿಂಟಾಲ್ಗೆ ೭೦೦ ರೂ. ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿರುವ ಖಾಸಗಿ ದಲ್ಲಾಳಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಚಂಡಮಾರುತದ ಮಳೆಹಾನಿಗೆ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಎ.ಎಲ್.ಭರತ್ ರಾಜ್, ಸಹ ಸಂಚಾಲಕ ಎನ್.ಲಿಂಗರಾಜ ಮೂರ್ತಿ, ಮಹದೇವು, ಸುನೀಲ್, ಶಿವಕುಮಾರ್, ಗುರುಸ್ವಾಮಿ ಸೇರಿದಂತೆ ಹಲವರಿದ್ದರು.
23rd December 2024
ಮಂಡ್ಯ: ಕರ್ನಾಟಕ ಸಂಘದ ಮತ್ತು ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದ ವತಿಯಿಂದ ಕುವೆಂಪು ಅವರ ಜನ್ಮದಿನದ ಅಂಗವಾಗಿ ಡಿಸೆಂಬರ್ ೨೪ರಿಂದ ೨೯ರವರೆಗೆ ಗಮಕ ವ್ಯಾಖ್ಯಾನ ಕಾರ್ಯಕ್ರಮವನ್ನು ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂಧು ಸಂಘದ ಅಧ್ಯಕ್ಷ ಜಯಪ್ರಕಾಶ್ಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ಅವರನ್ನು ನೆನೆಯುವ ಸಲುವಾಗಿ ಶ್ರೀ ರಾಮಾಯಣ ದರ್ಶನಂ ಆಧಾರಿತ ಗಮಕ-ವ್ಯಾಖ್ಯಾನ ಕಾರ್ಯಕ್ರಮವು ಸಂಜೆ ೪.೩೦ಕ್ಕೆ ನಡೆಯಲಿದ್ದು, ಕಾರ್ಯಕ್ರಮವನ್ನು ಪ್ರಸಿದ್ಧ ಗಮಕಿ ಎಂ.ಆರ್.ಸತ್ಯನಾರಾಯಣ ಉದ್ಘಾಟಿಸುವರು, ಪಿಇಎಸ್ ಕಾಜೇಜಿನ ಸಹ ಪ್ರಾಧ್ಯಾಪP ಡಾ.ಶ್ರೀನಿವಾಸಯ್ಯ ಎನ್.ವೈ ಅಧ್ಯಕ್ಷತೆ ವಹಿಸಿದ್ದಾರೆ ಎಂದರು.
ಡಿ.೨೪ರಿಂದ ೨೮ರವರೆಗೆ ಪ್ರತಿದಿನ ಸಂಜೆ ೫.೩೦ರಿಂದ ೦೭ರ ವರೆಗೆ ಗಮಕ ವಾಚನ- ವ್ಯಾಖ್ಯಾನ ನೆರವೇರಲಿದ್ದು, ಡಿ.೨೪ಕ್ಕೆ ಮಮತೆಯ ಸುಳಿ ಮಂಥರೆಯ ಕಾವ್ಯಭಾಗ, ಡಿ.೨೫ರಂದು ನಾನಕ್ಕನೆನ್ ನಿನಗೆ, ತಂಗಿಯ ಕಾವ್ಯಭಾಗ, ಡಿ.೨೬ರಂದು ವನಮಂಪೊಕ್ಕನಶೋಕಮಂ ಕಾವ್ಯಭಾಗ, ಡಿ.೨೭ರಂದು ಕುಂಬಕರ್ಣನನೆಬ್ಬಿಸಿಮ್ ಕಾವ್ಯಭಾಗ, ಡಿ.೨೮ರಂದು ಕರ್ನಾಟಕ ಸಂಘದ ಸಂಸ್ಥಾಪಕರಲ್ಲೊಬ್ಬರಾದ ಚಿ.ನಾ.ವಿಶ್ವನಾಥಶಾಸ್ತ್ರಿಗಳ ಸ್ಮರಣಾರ್ಥ ಗಮಕ ಕಲಾ ಪ್ರತಿಷ್ಠಾನದ ಸದಸ್ಯರಾದ ಶ್ರೀಮತಿ ಮತ್ತು ವಾಗ್ದೇವಿ ಅವರಿಂದ ಕಾವ್ಯಮೋದ ಗಮಕ ವಾಚನ ಮತ್ತು ವ್ಯಾಖ್ಯಾನ ನಡೆಯಲಿದೆ ಎಂದು ವಿವರಿಸಿದರು.
ಡಿ.೨೯ರಂದು ಬೆಳಿಗ್ಗೆ ೧೦ ಗಂಟೆಗೆ ಕುವೆಂಪು ಜನ್ಮೋತ್ಸವ ಆಚರಣೆ ಅಂಗವಾಗಿ ಕವಿಗೋಷ್ಠಿ ನಡೆಯಲಿದ್ದು, ಸಾಹಿತಿಗಳು ಮತ್ತು ಸಂಸ್ಕೃತಿ ಚಿಂತಕರಾದ ಪ್ರೊ.ಮೈಸೂರು ಕೃಷ್ಣಮೂರ್ತೀ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ವಿಮರ್ಶಕ ರೋಹಿತ್ ಅಗಸರಹಳ್ಳಿ, ಡಾ.ಭಾಸ್ಕರ್ ಮಾಳ್ವ, ಸಾವೆರಾ ಸ್ವಾಮಿ, ಬಲ್ಲೇನಹಳ್ಳಿ ಮಂಜುನಾಥ್, ಭವಾನಿ ಲೋಕೇಶ್, ಸತೀಶ್ ಜವರೇಗೌಡ, ದೊ.ಚಿ.ಗೌಡ, ಡಾ.ಸುಮಾರಾಣಿ ಶಂಭು, ಡಾ.ಶುಭಶ್ರೀ ಪ್ರಸಾದ್, ಸಬ್ಬನಹಳ್ಳಿ ಶಶಿಧರ್, ಡಾ.ಎಂ.ಎಸ್.ಅನಿತ ಸೇರಿದಂತೆ ಹಲವು ಕವಿಗಳು ಭಾಗವಹಿಸುವರು ಎಂದು ಹೇಳಿದರು.
ಮಧ್ಯಾಹ್ನ ೦೨ರಿಂದ ೦೩ರವರೆಗೆ ಪ್ರಸಿದ್ದ ವಿಮರ್ಷಕ ಡಾ.ನರರಹಳ್ಳಿ ಬಾಲಸುಬ್ರಹ್ಮಣ್ಯರಿಂದ ಕುವೆಂಪು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಮತ್ತು ಕುವೆಂಪು:ಯುವ ನೋಟ ಪುಸ್ತಕ ಬಿಡುಗಡೆ ನಡೆಯಲಿದೆ ಎಂದು ತಿಳಿಸಿದರು.
ಮಧ್ಯಾಹ್ನ ೩.೧೫ಕ್ಕೆ ಎರಡನೇ ಕವಿಗೋಷ್ಠಿ ನಡೆಯಲಿದ್ದು, ಡಾ.ಪ್ರದೀಪ್ಕುಮಾರ್ ಹೆಬ್ರಿ, ನಿ.ಗೂ ರಮೇಶ್, ಡಾ.ಗುಬ್ಬಿಗೂಡು ರಮೇಶ್, ಡಾ.ಕೆ.ಚಂದ್ರಶೇಖರ, ಡಾ.ಬೆಳ್ಳೂರು ವೆಂಕಟಪ್ಪ, ಡಾ.ಬ್ಯಾಡರಹಳ್ಳಿ ಶಿವರಾಜ್, ರಾಮಚಂದ್ರಪ್ಪ ಡಿ.ಆರ್, ಸೇರಿದಂತೆ ಇತರ ಕವಿಗಳು ಭಾಗವಹಿಸುವರು. ಕುವೆಂಪು ಸಾಹಿತ್ಯದಲ್ಲಿ ಸ್ರೀಯರ ಅಸ್ಮಿತೆ ಕುರಿತು ಸಂಘೋಧನಾ ವಿದ್ಯಾರ್ಥಿ ಎಸ್.ಬಿ.ತೇಜ ಅವರಿಂದ ಉಪನ್ಯಾಸ ನಡೆಯಲಿದೆ. ತದನಂತರ ಮೈಸೂರಿನ ಸಾಮಾಜಿಕ ಅರಣ್ಯದ ಉಪಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಕವಿಗಳು, ಚಿಂತಕರು ಆದ ಡಾ.ರಾಗೌ ಸಮಾರೋಪ ಭಾಷಣ ಮಾಡುವುರು ಎಂದು ಮಾಹಿತಿ ನೀಡಿದರು.
ಡಿ.೨೫ರಂದು ಪ್ರಶಸ್ತಿ ಪ್ರಧಾನ ಸಮಾರಂಭ
ಮುಂದುವರೆದು ಮಾತನಾಡಿದ ಅವರು, ಡಿಸೆಂಬರ್ ೨೫ರ ಬೆಳಿಗ್ಗೆ ೧೧ ಗಂಟೆಗೆ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ವಿವಿಧ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಜಲಸಾರಿಗೆ ನಿಗಮದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಯಪುರ ಪ್ರಶಸ್ತಿ ಪ್ರಧಾನ ಮಾಡಲಿದ್ದು, ನಿರೂಪಕಿ ಮತ್ತು ಲೇಖಕಿ ಭವಾನಿ ಲೋಕೇಶ್ ಅಭಿನಂದನಾ ನುಡಿಗಳನ್ನಾಡುವರು. ಡಾ.ಮ.ರಾಮಕೃಷ್ನ, ಪ್ರೊ.ಜಯಪ್ರಕಾಶ ಮಾವಿನಕುಳಿ, ಡಾ.ಎಂ.ಎನ್.ತಿಮ್ಮೇಗೌಡ, ಸೊಂದಲಗೆರೆ ಲಕ್ಷ್ಮೀಪತಿ, ಎಸ್.ಬಿ.ರಾಜೇಗೌಡ, ಡಾ.ಎಸ್.ಸುಹಾಸಿನಿ, ಬಿ.ಟಿ.ಚಂದ್ರಕಾಂತ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾಗದ ಸೋಮಶೇಖರ್, ನಾಗಪ್ಪ ಇತರರಿದ್ದರು.
23rd December 2024
ಮಂಡ್ಯ: ಮಧು ಜಿ.ಮಾದೇಗೌಡ ಅವರ ಅಭಿಮಾನಿಗಳ ಬಳಗದ ವತಿಯಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಭಾರತಿ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಮಧು ಜಿ.ಮಾದೇಗೌಡ ಅವರ ೬೦ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಷಷ್ಟ್ಯಬ್ಧಿ ಸಮಾರಂಭವನ್ನು ಡಿಸೆಂಬರ್ ೨೪ರಂದು ಮಧ್ಯಾಹ್ನ ೦೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಕಾರ್ಯಪಾಲಕ ಅಭಿಯಂತರ ಹಾಗೂ ಅಭಿಮಾನಿ ಬಳಗದ ಬಸವರಾಜೇಗೌಡ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೊರವಲಯದಲ್ಲಿನ ಎ & ಎ ಕನ್ವೆಂಷನ್ ಹಾಲ್ನಲ್ಲಿ ನಡೆಯಲಿರುವ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದು. ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದರು.
ಶಾಸಕ ರವಿಕುಮಾರ್ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ಗೂಳಿಗೌಡ ಅವರು ಮಧು ಜಿ.ಮಾದೇಗೌಡ ದಂಪತಿಗಳನ್ನು ಅಭಿನಂದಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ಗೌಡ ಭಾಗವಹಿಸುವರು. ಮಧು ಜಿ.ಮಾದೇಗೌಡ ಮತ್ತು ಬಿಂದು ಮಧು ಜಿ.ಮಾದೇಗೌಡ ಉಪಸ್ಥಿತರಿರುವರು ಎಂದು ವಿವರಿಸಿದರು.
ಡಾ.ಜಿ.ಮಾದೇಗೌಡ ಅವರ ಕುರಿತು ಡಾ.ಮ.ರಾಮಕೃಷ್ಣ ಅವರು ಹಿನ್ನೋಟ ನುಡಿಗಳನ್ನಾಡಲಿದ್ದು, ಮಧು ಜಿ.ಮಾದೇಗೌಡ ಅವರ ಕುರಿತು ಡಾ.ಎಸ್.ಬಿ.ಶಂಕರಗೌಡ ಮುನ್ನೋಟದ ನುಡಿಗಳನ್ನು ನುಡಿವರು, ಮಧು ಜಿ.ಮಾದೇಗೌಡ ಅವರ ಜೀವನ ಮತ್ತು ಸಾಧನೆ ಕುರಿತು ಡಾ.ಕೆಂಪಮ್ಮ ಅವರು ರಚಿಸಿದ `ಮಕರಂದ' ಪುಸ್ತಕವನ್ನು ಇದೇ ವೇಳೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಮಧ್ಯಾಹ್ನ ೦೨ಗಂಟೆಗೆ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದು, ಮಧು ಜಿ.ಮಾದೇಗೌಡ ದಂಪತಿಗಳೂ ಗೌರವ ಸ್ವೀಕರಿಸಲಿದ್ದಾರೆ. ಸದರಿ ಕಾರ್ಯಕ್ರಮದ ನಿರ್ವಹಣೆಯನ್ನು ಶ್ವೇತಾ ಎಂ.ಯು ನಡೆಸಿಕೊಡಲಿದ್ದಾರೆ. ಮಧು ಜಿ.ಮಾದೇಗೌಡ ಅವರ ವಿಧಾನ ಪರಿಷತ್ ವ್ಯಾಪ್ತಿಯ ಜಿಲ್ಲೆಗಳಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯ ೨೦ ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಮಧು ಜಿ.ಮಾದೇಗೌಡರ ಹುಟ್ಟುಹಬ್ಬದ ಅಂಗವಾಗಿ ವಾರಪೂರ್ತಿ ಸಮಾಜಮುಖ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಡಿ.೨೬ರಂದು ಭಾರತೀನಗರದ ಭಾರತೀ ಕಾಲೇಜಿ (ಕಲ್ಲು ಕಟ್ಟಡದ ಒಳಾಂಗಣ)ನಲ್ಲಿ ಬೃಹತ್ ಉದ್ಯೋಗ ಮೇಳ, ಡಿ.೨೭ರಂದು ಮದ್ದೂರು ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮದ್ದೂರು ಪುರಸಭೆ, ಆಸ್ಟರ್ ಜಿ.ಮಾದೇಗೌಡ ಹಾಸ್ಪಿಟಲ್, ಶಂಕರ್ ಕಣ್ಣಿನ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಡಿ.೨೮ ಮತ್ತು ೨೯ರಂದು ರಾಜ್ಯಮಟ್ಟದ ಮುಕ್ತ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಎಂ.ಜಿ.ಎಂ ಕಪ್ ಪಂದ್ಯಾವಳಿಯನ್ನು ಭಾರತೀನಗರದ ಭಾರೀ ಕ್ರೀಡಾಂಗಣದಲ್ಲಿ ಆಯೊಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ನೆಲದನಿ ಸಂಘಟನೆಯ ರಮೇಶ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಸಂಘದ ರವೀಂದ್ರ, ಒಕ್ಕಲಿಗರ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತಕೃಷ್ಣ, ಎಸ್.ನಾರಾಯಣ್, ನಾಗರಾಜ್ ಸ್ವರೂಪ್ ಇದ್ದರು.
5th December 2024
ಮಂಡ್ಯ ಅಪರ ಜಿಲ್ಲಾಧಿಕಾರಿಯಾಗಿ ಬಿ.ಸಿ.ಶಿವನಂದಮೂರ್ತಿ ಅಧಿಕಾರ ಸ್ವೀಕಾರ
ಮಂಡ್ಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಬಿ.ಸಿ.ಶಿವನಂದಮೂರ್ತಿ ಕೆ.ಎ.ಎಸ್. (ಹಿರಿಯ ಶ್ರೇಣಿ) ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು.
4th December 2024
ಹಲಗೂರು:ಕಾವೇರಿ ವನ್ಯಜೀವಿಧಾಮದ ಹಲಗೂರು ವನ್ಯಜೀವಿ ವಲಯದ ಬಸವನಬೆಟ್ಟ ಮೀಸಲು ಅರಣ್ಯ ಪ್ರದೇಶದ ಮುತ್ತತ್ತಿ ಶಾಖೆಯ ಹೊಸದೊಡ್ಡಿ ಗಸ್ತಿನ ಬೋರ್ಡ್ ಗಲ್ಲು ಅರಣ್ಯ ಪ್ರದೇಶದಲ್ಲಿ ಭಾನುವಾರ ಕಡವೆ
ಮಾಂಸವನ್ನು ಚೀಲದಲ್ಲಿ ಸಾಗಣೆ ಮಾಡುತ್ತಿದ್ದ ಆರೋಪಿಗಳಾದ ಎಂ. ದರ್ಶನ್, ಎಚ್. ಟಿ. ಗಿರೀಶ್ ಇಬ್ಬರ ಆರೋಪಿಗಳನ್ನು ಬಂಧಿಸಲಾಗಿದ್ದು ಅದರಲ್ಲಿ ನಾರಾಯಣ ಅಲಿಯಾಸ್ ಪಟ್ಲೆ, ಸಿದ್ದರಾಜು ನಾಯ್ಕ್, ಶರತ್ ಇವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಸಿ. ಸುರೇಂದ್ರ ಹಾಗೂ ಕನಕಪುರ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಾಗೇಂದ್ರ ಪ್ರಸಾದ್ ಎಸ್. ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಅನಿಲ್ ಕುಮಾರ್ ಸಿ. ಹಾಗೂ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ಕಡವೆ ಮಾಂಸ ಸಾಗಿಸುತ್ತಿದ್ದ ಆರೋಪಿಗಳು ಅಧಿಕಾರಿಗಳನ್ನು ನೋಡಿ ಬೈಕ್ ಅನ್ನು ಬಿಟ್ಟು ಓಡಿ ಹೋಗುತ್ತಿದ್ದಾಗ ಆರೋಪಿಗಳಾದ
ದರ್ಶನ್ ಎಮ್., ಗಿರೀಶ ಎಚ್.ಟಿ ಇವರುಗಳನ್ನು ಬಂಧಿಸಿ ಪ್ಲಾಸ್ಟಿಕ್ ಚೀಲದಲ್ಲಿ ಇದ್ದ ಕಡವೆ ಮಾಂಸ, ಎರಡು ಬೈಕ್ ಹಾಗೂ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಾರಿಯಾಗಿರುವ ಆರೋಪಿಗಳಾದ
ನಾರಾಯಣ ಅಲಿಯಾಸ್ ಪಟ್ಲೆ, ಸಿದ್ದರಾಜನಾಯ್ಕ್ ,
ಶರತ್ ಇವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ
ಉಪ ವಲಯ ಅರಣ್ಯಾಧಿಕಾರಿಗಳಾದ ನಿಹಾಲ್ ಅಹ್ಮದ್, ಫ್ರಾನ್ಸಿಸ್ ನೋಹನ್ ಹಾಗೂ ಗಸ್ತು ಅರಣ್ಯ ಪಾಲಕರಾದ ಸಿದ್ದರಾಮ ಪೂಜಾರಿ, ನಬಿಲಾಲ್ ಕುರಿಕಾಯಿ, ಶ್ರೇಯಾಂಶ ವಸವಾಡೆ, ಮೌನೇಶ ಚಳ್ಳಗಿ ಇವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
* ಆರೋಪಿಗಳಿಂದ ವಶ ಪಡಿಸಿಕೊಂಡಿರುವ ಕಡವೆ ಮಾಂಸ ಹಾಗೂ 2 ಬೈಕುಗಳು ಮತ್ತು ಮೊಬೈಲ್ ಗಳು.
*