
8th January 2025
ಜ.10 ರಂದು ಮದ್ದೂರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ
19 ಕೆರೆಗಳಿಗೆ ನೀರು ತುಂಬಿಸಿದ್ದಕ್ಕೆ ಚಾಕನಕೆರೆಗೆ ಬಾಗಿನ ಸಮರ್ಪಣೆ
ನವದೆಹಲಿ: ಮದ್ದೂರು ವಿಧಾನಸಭೆ ಕ್ಷೇತ್ರದ 19 ಕೆರೆಗಳಿಗೆ ನೀರು ತುಂಬಿಸಿದ ಹಿನ್ನಲೆಯಲ್ಲಿ ಶುಕ್ರವಾರದಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಕನಕೆರೆಗೆ ಬಾಗಿನ ಅರ್ಪಿಸಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿ.ಸಿ.ತಮ್ಮಣ್ಣ ಅವರು, ಅಂದು ಬೆಳಗ್ಗೆ 11 ಗಂಟೆಗೆ ಸ್ಥಳಕ್ಕೆ ಆಗಮಿಸಲಿರುವ ಕೇಂದ್ರ ಸಚಿವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುವುದು. ಮಧ್ಯಾಹ್ನ 12 ಗಂಟೆ ನಂತರ ಸಚಿವರು ಬಾಗಿನ ಅರ್ಪಿಸುವರು. ಅವರ ಒತ್ತಾಸೆಯಿಂದಲೇ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿದೆ ಎಂದಿದ್ದಾರೆ.
ಇದೇ ವೇಳೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಮಹಿಳೆಯರು ಹಾಗೂ ರೈತರನ್ನು ಸನ್ಮಾನಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
7th January 2025
ಶ್ರೀರಂಗಪಟ್ಟಣ: ನಾಲೆಗೆ ನೀರು ಬಿಡುವ ಸಲುವಾಗಿ ಸಿಆರ್ ಎಸ್ ಐಸಿಸಿ ಸಭೆಯಲ್ಲಿ ಶಾಸಕರ, ಅಧಿಕಾರಿಗಳ ಅಭಿಪ್ರಾಯ ತೆಗೆದುಕೊಂಡು ಜನವರಿ 10ರಿಂದ ಕಟ್ಟು ಪದ್ದತಿಯಂತೆ 4 ಕಟ್ಟು ನೀರು ಬಿಡಲು ನಿರ್ಧಾರಿಸಲಾಗಿದೆ. ಅದಷ್ಟೂ ಬೇಗ ರೈತರು ನಾಟಿ ಮಾಡಲು ಮುಂದಾಗುವಂತೆ ಕೃಷಿ ಹಾಗೂ ನೀರಾವರಿ ಸಚಿವ ಎನ್ ಚಲುವರಾಯಸ್ವಾಮಿ ಸಲಹೆ ನೀಡಿದರು.
ತಾಲ್ಲೂಕಿನ ಕೆ ಆರ್ ಎಸ್ ನಲ್ಲಿ ನಡೆದ ಐಸಿಸಿ ಸಭೆ ನಂತರ ಅವರು ಮಧ್ಯಮಗಳ ಜೊತೆ ಮಾತನಾಡಿದರು.
18 ದಿನಗಳು ನೀರು ಹರಿಸಲಾಗುವುದು. 12 ದಿನಗಳು ನಿಲ್ಲಿಸಲಾಗುವುದು. ನಾಲೆಯ ಪ್ರಾರಂಭದಿಂದ ಕೊನೆ ಭಾಗದ ರೈತರು ಏಕಕಾಲದಲ್ಲಿ ನಾಟಿಗೆ ಮುಂದಾಗಬೇಕು. ಮುಂದೆ ಯಾವ ಪರಿಸ್ಥಿತಿ ಎದುರಾಗುತ್ತದೆ ಎಂದು ಗೊತ್ತಿಲ್ಲ ಅಲ್ಪಾವಧಿ ಬೆಳೆ ಬೆಳೆಯಲು ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಈಗ ಮುಖ್ಯ ನಾಲೆಗಳ ದುರಸ್ತಿ ಕಾರ್ಯ ಮಾಡಲು ಸಾಧ್ಯವಿಲ್ಲ. ಸಂಪರ್ಕ ನಾಲೆಗಳ ದುರಸ್ಥಿಗೆ ಅವಕಾಶವಿದೆ. ಆದ್ಯತೆ ಮೇರೆಗೆ ನಾಲಾ ಕೆಲಸ ಮಾಡಲಾಗುವುದು ಎಂದ ಅವರು ಜೂನ್ ಅಂತ್ಯದವರೆಗೂ ಕುಡಿಯಲು ಹಾಗೂ ಬೆಳೆಗಳಿಗೆ ಸಾಕಾಗಲಿದೆ. ಜಿಲ್ಲೆಯ ನಾಲೆಗಳ ಆಧಾರಿತ ಶೇ 100 ರಷ್ಟು ಕೆರೆಗಳು ತುಂಬಿವೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಕೆಆರ್ ಎಸ್ ನಿರ್ಮಾಣವಾದ 92 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 156 ದಿನಗಳು 124.48 ಅಡಿ ನೀರಿನ ಲಭ್ಯತೆ ಹೊಂದಿದೆ ಎಂದು ಸಂತಸದಿಂದ ನುಡಿದರು.
ಕಾಂಗ್ರೆಸ್ ಸರ್ಕಾರದ ಕಾಲ್ಗುಣ ಸರಿಯಿಲ್ಲ ಎಂದು ಟೀಕೆ ಮಾಡುತ್ತಿದ್ದರು. ನಮ್ಮದೇ ಸರ್ಕಾರದಲ್ಲಿ ಕೆಆರ್ ಎಸ್ ತನ್ನ ಭಾಗ್ಯ ತೋರಿದೆ. ಕಳೆದ ಆರು ತಿಂಗಳು ನಾಲೆಗಳಿಗೆ ನೀರು ಹರಿಸಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಕ್ಕಿಂತ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಇದಾಗಿಯೂ ಜಲಾಶಯ ಸಂಪೂರ್ಣ ಭರ್ತಿ ಇದ್ದು 124.30 ಅಡಿ ಪ್ರಸ್ತುತ ನೀರಿನ ಮಟ್ಟ ಇದೇ ಎಂದು ತಿರುಗೇಟು ನೀಡಿದರು.
ಡಿನ್ನರ್ ಮೀಟಿಂಗ್ ವಿಚಾರವಾಗಿ ಸಿಎಂ, ಡಿಸಿಎಂ ಈಗಾಗಲೇ ಮಾತನಾಡಿದ್ದಾರೆ. ಊಟಕ್ಕೆ ಕರೆಯುವುದು ರಾಜಕಾರಣವಲ್ಲ. ಸಮುದಾಯ ಸಂಘಟನೆ ಮಾಡುವುದು ಪಕ್ಷಕ್ಕೆ ಒಳ್ಳೆಯದು. ತಪ್ಪೇನಿದೆ ಎಂದರು.
ನರೇಂದ್ರಸ್ವಾಮಿಗೆ ಸಚಿವ ಸ್ಥಾನ ನೀಡಲಿ:
ನರೇಂದ್ರಸ್ವಾಮಿ ಅವರನ್ನ ಸಚಿವರಾಗಿ ಮಾಡಲಿ ಎಂದು ಜಿಲ್ಲೆಯ ಆರು ಶಾಸಕರ ಬಯಕೆ, ಆಶಯವು ಆಗಿದೆ. ಆದರೆ ಸಚಿವ ಸ್ಥಾನ ಬದಲಾವಣೆ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಉತ್ತರ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮುಂದೆ ತೀರ್ಮಾನ ಮಾಡುವವರೆಗೂ ಮುಂದುವರೆಯಿರಿ ಎಂದು ಹೈಕಮಾಂಡ್ ಹೇಳಿದ್ದು, ಮುಂದೆ ಎಐಸಿಸಿ ಏನು ತೀರ್ಮಾನ ಮಾಡುತ್ತದೆ ಎಂದು ನೋಡಬೇಕಿದೆ ಎಂದರು.
ಒಕ್ಕಲಿಗರ ಸಂಘಟನೆ ಬಗ್ಗೆ ಕೇಳಿದಾಗ, ನಾವು ಸಂಘಟನೆ ಮಾಡುವ ಅವಶ್ಯಕತೆ ಬಂದಾದ ಮಾಡುತ್ತೇವೆ. ಎಲ್ಲಾ ಸಮಾದಾಯದವರು ಸಂಘಟಿತರಾಗುವ ಅವಶ್ಯಕತೆ ಇದೆ ಎಂದರು.
ಈ ವೇಳೆ ಶಾಸಕರಾದ ರಮೇಶ್ ಬಾಬು ಬಂದಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ ಸೇರಿದಂತೆ ಕೆಆರ್ ಎಸ್ ಅಧಿಕಾರಿಗಳು ಇದ್ದರು.
7th January 2025
ಕೆಆರ್ ಎಸ್: ನಮ್ಮ ಬ್ರದರ್ ಗೆ ನಮ್ಮ ಸರ್ಕಾರ ನೋಡಲು ಆಗುತ್ತಿಲ್ಲ ಸರ್ಕಾರ ರಚನೆಯಾದ ನಂತರ ನಮ್ಮ ಬ್ರದರ್ ಸಂಕಟ ಪಡುತ್ತಿದ್ದಾರೆ. ಅವರಿಗೆ ಯಾರಾದರೂ ಸಮಾಧಾನ ಹೇಳುವವರು ಇದ್ದರೇ ಹೇಳಿ ಎಂದು ವ್ಯಂಗ್ಯವಾಡಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ ಆರ್ ಎಸ್ ನಲ್ಲಿ ನಡೆದ ಐಸಿಸಿ ಸಭೆ ನಂತರ ಅವರು ಮಧ್ಯಮಗಳ ಜೊತೆ ಅವರು ಮಾತನಾಡಿದರು.
ಸರ್ಕಾರ ಬೀಳುತ್ತೆ, ತೆಗೆಯುತ್ತೇವೆ ಎನ್ನುವುದು ಒಳ್ಳೆಯದಲ್ಲ. ಇನ್ನು ಮೂರುವರೆ ವರ್ಷ ಸರ್ಕಾರ ಇದೇ ರೀತಿ ಇರುತ್ತದೆ. ನಮ್ಮನ್ನು ನೋಡಿ ಅವರಿಗೆ ಸಂಕಟ ಬರುತ್ತದೆ. ಇದಕ್ಕೆ ನಮ್ಮ ಬಳಿ ಮೆಡಿಸಿನ್ ಇಲ್ಲ ಎಂದು ಕುಮಾರಸ್ವಾಮಿ ಹೆಸರೇಳದೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಬ್ರದರ್ ವಿರುದ್ಧ ನಾವು ಯಾವತ್ತು ಮಾತನಾಡಿಲ್ಲ. ಅವರು ಸಿಎಂ ಆದಾಗಲೂ ಅವರ ವಿರುದ್ದ ಮಾತನಾಡಿಲ್ಲ. ಆದರೆ ನಮ್ಮನ್ನು ಅವರಿಂದ ಸಹಿಸಲು ಆಗುತ್ತಿಲ್ಲ. ಇನ್ನೋಬ್ಬರನ್ನ ನೋಡಿ ಅಸೂಯೆ ಪಡಬಾರದು. ನಾನು ಎಂದಿಗೂ ಅವರನ್ನ ನನ್ನ ಸ್ನೇಹಿತ, ಬ್ರದರ್ ಅಂತಾನೇ ಹೇಳುತ್ತೇನೆ ಎಂದು ಮರ್ಮಿಕವಾಗಿ ನುಡಿದರು.
ರಾಜ್ಯದಲ್ಲಿ ಸಿಎಂ ಆದವರೂ ಕೇಂದ್ರದಲ್ಲಿ ಮಂತ್ರಿ ಆಗಿದ್ದರೂ ಅವರಿಗೆ ಸಮಾಧಾನವಿಲ್ಲ. ಚನ್ನಪಟ್ಟಣ ಉಪಚುನಾವಣೆ ಮಗನ ಪರ ಓಟ್ ಕೇಳಲಿಲ್ಲ
ಬರಿ ಸರ್ಕಾರದ ವಿರುದ್ಧ ಮಾತನಾಡಿದರು. ಈಗಲೂ ಚನ್ನಪಟ್ಟಣದಲ್ಲಿ ಇದನ್ನ ಅವರ ಪಕ್ಷದವರೇ ಆಡಿಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.
ಈ ವೇಳೆ ಶಾಸಕರಾದ ರಮೇಶ್ ಬಾಬು ಬಂದಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ ಸೇರಿದಂತೆ ಕೆಆರ್ ಎಸ್ ಅಧಿಕಾರಿಗಳು ಇದ್ದರು.
7th January 2025
ಪಾಂಡವಪುರ: ನಮ್ಮ ಸರ್ಕಾರ ರೈತಪರ ಸರ್ಕಾರ, ರೈತರ ಮೇಲೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಪ್ರಕರಣಗಳು ತುರ್ತಾಗಿ ವಿಲೇವಾರಿ ಮಾಡಿ ಎಂದು ಸೂಚನೆ ನೀಡಿದ್ದೇವೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಜಿಲ್ಲಾಯ ಪ್ರವಾಸಿ ತಾಣ ಮೇಲುಕೋಟೆಯಲ್ಲಿ ನಿರ್ಮಿಸಲಾಗಿದ್ದ ನೂತನ ನಾಡ ಕಚೇರಿ ಕಟ್ಟಡವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಜಿಲ್ಲೆಯ ಇದ್ದ ಹತ್ತು ಸಾವಿರ ಪ್ರಕರಣಗಳನ್ನು ಒಂದೇ ವರ್ಷದಲ್ಲಿ ಇತ್ಯಾರ್ಥಗೊಳಿಸಿದ್ದೇವೆ. ರಾಜ್ಯದಾದ್ಯಂತ ಈ ಆಂದೋಲನ ಮುಂದುವರೆಯಲಿದೆ ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ನೂರು ಒನ್ ಟು ಫೈ ಸೇವೆ ಒದಗಿಸುವುದು ಕಷ್ಟವಾಗಿತ್ತು ಆದರೆ ಕಂದಾಯ ಇಲಾಖೆ ಸಚಿವರ ಮತ್ತು ಜಿಲ್ಲಾಡಳಿತ ಸಹಕಾರದಿಂದ ಒಂದೇ ವಾರದಲ್ಲಿ 270 ಕ್ಕೂ ಹೆಚ್ಚು ಒನ್ ಟು ಫೈವ್ ಮಾಡಿ, ಸ್ಕೇಚ್, ಪೋಡಿ, ಆಕಾರಬಂಧು ಎಲ್ಲವನ್ನೂ ಒಂದೇ ದಾಖಲೆಯಲ್ಲಿ ನೀಡಲಾಗಿದೆ. ಇನ್ನು ಆರು ತಿಂಗಳಲ್ಲಿ ಬಾಕಿ ಇರುವ ಒನ್ ಟು ಫೈವ್ ಸಮಸ್ಯೆ ಇತ್ಯಾರ್ಥಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ನಾಡ ಕಚೇರಿಯಲ್ಲಿ ಭ್ರಷ್ಟಾಚಾರ ನಿಲ್ಲಿಸಲು ಜನತೆಯ ಸಹಕಾರ ಅಗತ್ಯ. ಜನರು ಅಧಿಕಾರಿಗಳ ಮೇಲೆ ಒತ್ತಡ ಹೇರುವುದನ್ನು ಕಡಿಮೆ ಮಾಡಬೇಕು. ಸರ್ಕಾರದೊಂದಿಗೆ ಸಹಕಾರಿದರೆ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ವೇಗವಾಗಿ ನಡೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಮನ್ ಮುಲ್ ನಿರ್ದೇಶಕ ನಾಗಚಂದ್ರ, ತ್ಯಾಗರಾಜು, ಭಾಗ್ಯಮ್ಮ ಮತ್ತು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
7th January 2025
30 ಕೋಟಿರೂನಲ್ಲೆ ಕಾಮಗಾರಿ ಮುಗಿಸಲು ಗುತ್ತಿಗೆದಾರನಿಗೆ ಯಾವ ಒತ್ತಡವಿದೆಯೋ ತಿಳಿಯದು: ಎನ್ ಚಲುವರಾಯಸ್ವಾಮಿ
ಪಾಂಡವಪುರ: 42 ಕೋಟಿ ರೂ ತಗಲುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶೇ 30ರಷ್ಟು ಕಡಿತಗೊಳಿಸಿ ಕೇವಲ 30 ಕೋಟಿ ರೂ ನಲ್ಲಿ ಕಾಮಗಾರಿ ಮಾಡಲು ಗುತ್ತಿಗೆದಾರ ಹೇಗೆ ತಯಾರಾದರೂ ಎಂದು ತಿಳಿಯದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮಾರ್ಮಿಕವಾಗಿ ನುಡಿದರು.
ಪಾಂಡವಪುರ ತಾಲೂಕಿನ ಸಹಕಾರ ಸಕ್ಕರೆ ಕಾರ್ಖಾನೆ ಮುಂಭಾಗ 30 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬನಘಟ್ಟ - ಕಿರಂಗೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಕಡಿಮೆ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡುವ ಗುತ್ತಿಗೆದಾರನಿಗೆ ಯಾವ ಒತ್ತಡವಿದೆಯೋ ತಿಳಿಯದು. ಉತ್ತಮ ರಸ್ತೆ ನಿರ್ಮಾಣ ಮಾಡಲಿ ಎಂಬ ಆಶಯ ನಮ್ಮದು ಎಂದು ಹೇಳಿದರು.
ಈಗಾಗಲೇ ಮಂಡ್ಯ ಸಂಸದರೂ ಆದ ಕೇಂದ್ರ ಸಚಿವರು ಗುದ್ದಲಿ ಪೂಜೆ ನೆರವೇರಿಸಿದ್ದು, ಸಮಯ ಅಭಾವದಿಂದ ಭಾಗವಹಿಸಲು ಸಾಧ್ಯವಾಗಿಲ್ಲ, ಆದ್ದರಿಂದ ಇಂದು ಗುದ್ದಲಿ ಪೂಜೆ ನೆರೆವೆರಿಸಿದ್ದೇವೆ ಎಂದರು.
ಬಹಳ ವರ್ಷಗಳಿಂದ ಹದಗೆಟ್ಟಿದ್ದ ಬನಘಟ್ಟ - ಕಿರಂಗೂರು ರಸ್ತೆಯಲ್ಲಿ ಜನಸಾಮಾನ್ಯರು ಇದುವರೆಗೂ ಅನುಭವಿಸುತ್ತಿದ್ದ ಟ್ರಾಫಿಕ್ ಸಮಸ್ಯೆ ಹಾಗೂ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದಷ್ಟು ಬೇಗ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರ ಹೆಚ್ಚಿರುತ್ತದೆ ಹಾಗಾಗಿ ಉತ್ತಮ ರಸ್ತೆ ನಿರ್ಮಾಣ ಮಾಡಿ ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಮಾತನಾಡಿ ಬನಘಟ್ಟದಿಂದ ಕಿರಂಗೂರು ರಸ್ತೆಯಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ಸರ್ಕಾರವು ಗುಣಮಟ್ಟದ ರಸ್ತೆ ಕಾಮಗಾರಿಗೆ 30 ಕೋಟಿ ರೂ ಅನುಮೋದನೆ ನೀಡಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ ಎಂದರು
ಸಭೆಯಲ್ಲಿ ಮನ್ ಮುಲ್ ಅಧ್ಯಕ್ಷ ಬೋರೆ ಗೌಡ, ಮುಖಂಡರಾದ ತ್ಯಾಗರಾಜ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
5th January 2025
ಬಾಯಿ ಚಪಲಕ್ಕೆ ಮಾತನಾಡುವ ಕುಮಾರಸ್ವಾಮಿ-ಎನ್.ಚಲುವರಾಯಸ್ವಾಮಿ ವಾಗ್ದಾಳಿ
ಮಂಡ್ಯ: ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಆದವರು ಮಾತನಾಡಿದರೆ ನಾವುಗಳು ತಡಕಾಡುವಂತದಾದಾಗ ನಮಗೆ ಸಂತೋಷವಾಗುತ್ತದೆ. ಕುಮಾರಸ್ವಾಮಿ ಅವರು ಚಪಲಕ್ಕೆ ಮಾತನಾಡುತ್ತಾರೆ. ಕುಮಾರಸ್ವಾಮಿ ಅವರು ಚಪಲಕ್ಕೆ ಮಾತನಾಡುತ್ತಾರೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ತಾಲೂಕಿನ ಕೆರಗೋಡು ಗ್ರಾಮದಲ್ಲಿ ವೃತ್ತ ನಿರೀಕ್ಷಕರ ನೂತನ ಕಛೇರಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಉನ್ನತ ಹುದ್ದೆಗಳನ್ನು ಅಲಂಕರಿಸಿದ ಅವರು ಮಾತನಾಡಿದರೆ ಅವರಿಗೆ ಉತ್ತರ ನೀಡಲು ತಿಳಿದವರ ಸಲಹೆ ಪಡೆಯುವಂತಿರಬೇಕು. ಬಾಯಿ ಚಪಲಕ್ಕೆ ಮಾತನಾಡುವವರಿಗೆ ಉತ್ತರ ನೀಡಬೇಕು ಎಂದೆನಿಸುವುದಿಲ್ಲ ಎಂದರು.
ಅಂಬೇಡ್ಕರ್ ಅವರು ನೀಡಿದ ಸಂವಿಧಾನದಡಿಯಲ್ಲಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ ನಡೆಸಲು ಜನರ ತೀರ್ಮಾನವೇ ಅಂತಿಮ. ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ಗೆಲುವು ಸರ್ಕಾರದ ಮೇಲಿನ ಅವಿಶ್ವಾಸವೋ, ಅಥವಾ ಅವರ ಬಾಯಿ ಚಪಲವೋ ತಿಳಿಸಬೇಕು ಎಂದು ಚಿವುಟಿದರು.
ಜಿಲ್ಲೆಯ ಲೋಕಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿಯಾಗಿ ಅವರ ಗೌರವಕ್ಕೆ ತಕ್ಕಂತೆ ಮಾತನಾಡಬೇಕು. ಆಗ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಲು ಹೆಮ್ಮೆ ಎನಿಸುವುದು. ಉದಾಸೀನ ಹೇಳಿಕೆಗಳ ಮೂಲಕ ಸರ್ಕಾರವನ್ನು ಹಾಗೂ ಇತರರನ್ನು ಟೀಕಿಸುವುದೇ ನಾಯಕತ್ವ ಎನಿಸಿಕೊಳ್ಳುವಂತೆ ಮಾತನಾಡುತ್ತಾರೆ ಎಂದು ಕುಟುಕಿದರು.
*ಸುಮಲತ ಕುಳಿತ ಕಾರಿನಲ್ಲಿ ನಾನು ಕೂರಲ್ಲ ಎನ್ನಲು ಕಾರಣ ಗೊತ್ತಿಲ್ಲ*
ಕಾರು ನೀಡಿಲ್ಲವೆಂದು ಹೇಳಿಕೆ ನೀಡಿದ್ದು, ನಾನು ಲೋಕಸಭಾ ಸದಸ್ಯನಾಗಿದ್ದ ವೇಳೆ ಹಿಂದೆ ಲೋಕಸಭಾ ಸದಸ್ಯರು ಬಳಸುತ್ತಿದ್ದ ಕಾರನ್ನು ಬಳಸಿದ್ದೆ, ರಾಜ್ಯ ಸರ್ಕಾರದಲ್ಲಿ ಹಿಂದಿನ ಸರ್ಕಾರದ ಮಂತ್ರಿಗಳು ಬಳಸುತ್ತಿದ್ದ ಕಾರುಗಳನ್ನೇ ಬಳಸುತ್ತಿದ್ದೇವೆ. ಹೊಸ ಕಾರು ಬರುವವರೆಗೂ ಸುಮಲತ ಅವರಿಗೆ ನೀಡಿದ್ದ ಕಾರನ್ನು ಬಳಸಬಹುದಿತ್ತು. ಮಾಜಿ ಸಂಸದೆ ಸುಮಲತ ಬಳಸುವ ಕಾರು ಬಳಸೊಲ್ಲ ಎಂದಿರುವುದಕ್ಕೆ ಕಾರಣ ತಿಳಿದಿಲ್ಲ ಎಂದರು.
ಸುಮಲತ ಅವರು ಸಂಸದರಾಗಿದ್ದರು. ಅವರ ಸ್ವಂತ ಕಾರಾಗಿರಲಿಲ್ಲ. ಅವರು ಕೂತ ಕಾರಿನಲ್ಲಿ ನಾನು ಕೂರಲ್ಲ, ನನಗೆ ಅವಶ್ಯಕತೆಯಿಲ್ಲ ಎಂದು ಅವರು ಹೇಳಲು ಏನು ಕಾರಣ ತಿಳಿದಿಲ್ಲ, ಲೋಕಸಭಾ ಸದಸ್ಯರಿಗೆ ನೀಡಿರುವ ಕಾರನ್ನೇ ಅವರ ಬಳಸಬೇಕು. ಅವರು ಕೇಂದ್ರದ ಮಂತ್ರಿಯಾಗಿದ್ದು, ಯಾವುದೇ ರಾಜ್ಯಕ್ಕೆ ಹೋದರೂ ಅಲ್ಲಿನ ಡಿಪಿಆರ್ನಂತೆ ಕಾರು ಒದಗಿಸಲಾಗುವುದು. ಇದನ್ನು ಅರ್ಥೈಸಿಕೊಳ್ಳಬೇಕೆಂದು ಹೇಳಿದರು.
ಸತ್ಯಹರಿಶ್ಚಂದ್ರನ ನಂತರ ಇತರರಿಂದ ದುಡ್ಡು, ಲಂಚ ಪಡೆಯದೇ ಇರುವವರು, ಭೂಮಿಯ ಮೇಲೆ ಯಾರದ್ದೂ ಸಹಾಯ ಪಡೆಯದೇ ಇರುವವರು ದೇಶಕ್ಕೆ ಸ್ವತಂತ್ರ್ಯ ಬಂದ ನಂತರ ಯಾರಾದರೂ ಸತ್ಯವಂತ ಇದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ವ್ಯಂಗ್ಯವಾಡಿದರು.
ಶ್ರೀರಂಗಪಟ್ಟಣದಿಂದ ಹುಣಸೂರು, ಶ್ರೀರಂಗಪಟ್ಟಣದಿಂದ ಬೀದರ್ ರಾಷ್ಟ್ರೀಯ ಹೆದ್ದಾರಿ ರಸ್ತೆಯೂ ರಾಜ್ಯ ಸರ್ಕಾರದಿಂದ ಮಂಜೂರಾಗಿದೆ. ಅಂತೆಯೇ ಕೇಂದ್ರ ಪರಿಸ್ಕೃತ ಯೋಜನೆಯಡಿ ಎಲ್ಲ ರಾಜ್ಯದ ರಸ್ತೆ ಅಭಿವೃದ್ಧಿ ಮಾಡುವಂತೆ ನಮ್ಮ ರಾಜ್ಯಕ್ಕೆ ಬರಬೇಕಾದ ಯೋಜನೆಗೆ ಅವರು ತಮ್ಮದೇ ಕೊಡುಗೆ ಎಂದರೆ ಹೇಗೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಕುಮಾರಸ್ವಾಮಿ ಅವರಿಗೆ ಸಾಧ್ಯವಾದಲ್ಲಿ ಜಿಲ್ಲೆಯಲ್ಲಿ ಪಾಂಡವಪುರದಿಂದ ಚನ್ನರಾಯಪಟ್ಟಣ ರಸ್ತೆ, ಮಂಡ್ಯದಿಂದ ಪ್ರವಾಸಿ ತಾಣ ಮೇಲುಕೋಟೆ ರಸ್ತೆ, ಮಂಡ್ಯದಿಂದ ನಾಗಮಂಗಲ ಮೂಲಕ ಕದಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಸೇರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಬದಲಿಸುವರೋ, ವಿಶೇಷ ಅನುದಾನ ತರುವರೋ ಅಭಿವೃದ್ಧಿ ಮಾಡಿದರೆ ಕುಮಾರಸ್ವಾಮಿ ಅವರನ್ನು ಹೊಗಳಿ, ಸನ್ಮಾನ ಮಾಡುತ್ತೇನೆ ಎಂದು ಮನವಿ ಮಾಡಿದರು.
ಇಂದು ಮಂಡ್ಯಕ್ಕೆ ಕೃಷಿ ವಿವಿ, ನೂತನ ಮೈಷುಗರ್ ಕಾರ್ಖಾನೆ ಘೋಷಣೆಯನ್ನು ಸಂಪುಟದ ಮುಂದೆ ತರುತಿದ್ದು ಇಂತಹ ಯಾವುದಾದರು ಅಭಿವೃದ್ಧಿಯನ್ನು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡಲಿಲ್ಲ. ಈಗ ಕೇಂದ್ರದ ಮಂತ್ರಿಯಾಗಿದ್ದು, ಇಂತಹ ಹತ್ತು ಅಭಿವೃದ್ಧಿ ಕೆಲಸಗಳನ್ನು ಜಿಲ್ಲೆಗೆ ತರಬಹುದು ಮಾಡಿದರೆ ಅವರನ್ನು ಅಭಿನಂದಿಸುತ್ತೇನೆ ಎಂದರು.
ಕಳೆದ ೧೦ ವರ್ಷಗಳಿಂದ ಕೇಂದ್ರ ಸರ್ಕಾರದಿಂದಲೇ ಹಲವು ವಸ್ತುಗಳ, ದಿನ ಬಳಕೆಯ ವಸ್ತುಗಳು, ಪೆಟ್ರೋಲ್- ಡೀಸೆಲ್ ದರ ಹೆಚ್ಚಾಗಿದೆ. ೭ನೇ ಹಣಕಾಸು ಯೋಜನೆ ಜಾರಿಯಾಗಿದೆ. ಹಾಗೂ ನೆರೆ ರಾಜ್ಯಗಳಲ್ಲಿ ಬಸ್ ದರ ನಮಗಿಂತಲೂ ಹೆಚ್ಚಿದೆ. ಅಲ್ಲದೇ ಕೆಎಸ್ಆರ್ಟಿಸಿ ಸಂಸ್ಥೆಯ ದರ ಪರಿಷ್ಕರಣೆ ಮಾಡಿ ೧೫ ವರ್ಷಗಳಾಗಿವೆ. ಇಂದಿಗೂ ಶೇ.೧೫ರಷ್ಟು ಹೆಚ್ಚಳ ಮಾಡಿದರು ನೆರ ರಾಜ್ಯಗಳಿಗಿಂತಲೂ ಕಡಿಮೆ ಇದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಈ ವೇಳೆ ಶಾಸಕ ರವಿಕುಮಾರ್ಗೌಡ ಇದ್ದರು
5th January 2025
ಕೆರಗೋಡು ವೃತ್ತ ನಿರೀಕ್ಷಕರ ಕಚೇರಿ ಉದ್ಘಾಟನೆ
ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ವೃತ್ತ ನಿರೀಕ್ಷಕರ ಕಚೇರಿಯನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟನೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ದಿನಗಳ ಹಿಂದೆಯೇ ಉದ್ಘಾಟನೆಗೊಳ್ಳಬೇಕಾದ ಕೆರಗೋಡು ವೃತ್ತ ನಿರೀಕ್ಷಕರ ಕಚೇರಿಯು ಹಲವು ಕಾರಣಗಳಿಂದ ತಡವಾಗಿದ್ದು ಸಾರ್ವಜನಿಕರ ಪೊಲೀಸ್ ಸೇವೆ ನಿರಂತರವಾಗಿ ದೊರೆಯಲು ತಡವಾಗುವುದನ್ನು ತಡೆಯಲು ಅಧಿಕೃತವಾಗಿ ಇಂದು ಉದ್ಘಾಟನೆಗೊಂಡಿದೆ ಎಂದು ಸಚಿವರು ತಿಳಿಸಿದರು.
ಈ ವೇಳೆ ಶಾಸಕ ರವಿಕುಮಾರ್ಗೌಡ, ಪೊಲೀಸ್ ಡಿಜಿಪಿ ಡಾ.ಕೆ.ರಾಮಚಂದ್ರರಾವ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.
24th December 2024
ಮಂಡ್ಯ: ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅವಹೇಳನವಾಗಿ ಮಾತಾಡಿದ್ದನ್ನ ಸಿಬಿಐ ವಹಿಸುವ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅದು ವಿಧಾನಸಭೆಯಲ್ಲಿ ದಾಖಲಾಗಿಲ್ಲ ಎಂಬುದು ಬಳಸಿಕೊಂಡು ಸಿ.ಟಿ.ರವಿ ಮಾತನಾಡುತಿದ್ದಾರೆ . ವಿಧಾನ ಸಭೆಯಲ್ಲಿ ಇಂತಹ ವಿಷಯಗಳನ್ನ ಮಾತನಾಡಿದ್ದಾರೆ ಎಂದು ದಾಖಲು ಮಾಡಲಾಗುವುದಿಲ್ಲ. ಆದರೆ ಅಲ್ಲಿದ್ದ ಎಲ್ಲಾ ಸದಸ್ಯರಿಗೂ ಅವರು ಮಾತನಾಡಿರುವುದು ಗೊತ್ತಿದೆ ಎಂದರು.
ಸಿ.ಟಿ.ರವಿ ಈ ರೀತಿ ಮಾತನಾಡಬಾರದಿತ್ತು ಎಂದು ಅವರಪಕ್ಷದವರೇ ನನ್ನ ಜೊತೆ ಹೇಳಿಕೊಂಡಿದ್ದಾರೆ. ಸೀನಿಯರ್ ಲೀಡರಾಗಿ ಆ ರೀತಿ ಮಾತನಾಡುವುದು ಮಹಾ ಅಪರಾಧ ಎಂದು ಬಣ್ಣಿಸಿದರು.
ಇದು ಆಕಸ್ಮಿಕ, ಯಾಕಾಯ್ತೊ, ಏನಾಯ್ತೊ ಮಾತನಾಡಿದ್ದೇನೆ. ಇದಕ್ಕೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರೆ ಮರ್ಯಾದೇ ಹೋಗೋದು ಸ್ವಲ್ಪ ಕಡಿಮೆ ಆಗುತ್ತಿತ್ತು. ಆದರೂ ಇನ್ನು ಮಾತನಾಡುತಿದ್ದಾರೆ. ಯಾರೇ ಆಗಲಿ ಇಂತಹ ಪದಗಳನ್ನ ಉಪಯೋಗಿಸೋದು ಗೌರವ ಅಲ್ಲ ಎಂದು ಹೇಳಿದರು.
ಆ ರೀತಿ ನಿಂತು ಮಾತನಾಡಿಕೊಂಡು ಸವಾಲು ಹಾಕೋದಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಬೇಕಲ್ಲವೇ. ಲಕ್ಷೀ ಹೆಬ್ಬಾಳ್ಕರ್ ಹೇಳಿದಂತೆ ಪ್ರಮಾಣ ಮಾಡಲಿ ಎಂದರು.
ಎನ್ಕೌಂಟರ್ ಗೂ ಪ್ರಕಾರಣಕ್ಕೂ ಏನು ಸಂಬಂಧ?
ಎನ್ಕೌಂಟರ್ ಗೂ ಸದರಿ ಪ್ರಕಾರಣಕ್ಕೂ ಏನು ಸಂಬಂಧ ಇದೆ. ಬಿಜೆಪಿ ಬಳಿ ಅನೇಕ ಏಜೆನ್ಸಿ ಇದೆಯಲ್ಲ ತನಿಖೆ ಮಾಡಿಸಲಿ ಎಂದು ಸಿ.ಟಿ.ರವಿ ಎನ್ಕೌಂಟರ್ ಗೆ ಪ್ಲಾನ್ ಮಾಡಲಾಗಿತ್ತು ಎಂಬ ಪ್ರಹ್ಲಾದ್ ಜೋಷಿ ಹೇಳಿಕೆಗೆ ತಿರುಗು ಬಾಣ ಬಿಟ್ಟರು.
ಅವರು ತಪ್ಪು ಮಾಡಿಕೊಂಡಿದ್ದಾರೆ, ಈ ರೀತಿ ಸ್ಟೇಟ್ಮೆಂಟ್ ಕೊಟ್ರೆ ಡೈವರ್ಟ್ ಆಗುತ್ತೆ ಎಂದು ಆ ತಪ್ಪು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಸಾರ್ವಜನಿಕ ಹಿತವನ್ನ ಕಾಪಾಡುವುಸುದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಜವಾಬ್ದಾರಿ. ಕಾನೂನು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಬಿಜೆಪಿಯವರು ಈ ವಿಚಾರವನ್ನ ಬೆಳೆಸುವ ಕೆಲಸ ಮಾಡುತ್ತಿರೋದು. ಪ್ರತಿಭಟನೆ, ಹೇಳಿಕೆ ನೀಡುತ್ತಿರೋರು ಅವರೇ. ಸಿ.ಟಿ.ರವಿ ಆಗಲಿ, ಬಿಜೆಪಿ, ಜೆಡಿಎಸ್ ನವರು ಇದನ್ನು ಮುಂದುವರೆಯುವ ಕೆಲಸ ಮಾಡುತಿದ್ದಾರೆ ಎಂದರು.
ಸರ್ಕಾರ ಬಂದಾಗಿನಿಂದಲೂ ಇಲ್ಲದೇ ಇರೋ ವಿಚಾರವನ್ನ ಹೇಳಿಕೊಂಡು ಬರುವ ಕೆಲಸ ಮಾಡುತ್ತಿದ್ದಾರೆ. ಅದನ್ನೇ ಮುಂದುವರೆಸಿದ್ದಾರೆ. ಸುಮ್ಮನೆ ರಾಜಕೀಯ ಪ್ರೇರಿತರಾಗಿ ಎಷ್ಟೇ ಮಾತನಾಡಿದರೂ ಪ್ರಯೋಜನ ಇಲ್ಲ ಎಂದು ಕುಟುಕಿದರು.
24th December 2024
ಮಂಡ್ಯ: ಮೈಷುಗರ್ ಪ್ರೌಢ ಶಾಲೆಯ ಅಮೃತ ಮಹೋತ್ಸವ ಸಮಾರಂಭವನ್ನು ಶಾಲೆಯ ಪ್ರಾಂಗಣದಲ್ಲಿ ಡಿಸೆಂಬರ್ ೨೮ರಂದು ಬೆಳಿಗ್ಗೆ ೯ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮೈಷುಗರ್ ಅಧ್ಯಕ್ಷ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಸಿ.ಡಿ.ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದು, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸುವರು ಎಂದರು.
ಉದ್ಘಾಟನೆಯನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದು, ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಆಶಯ ನುಡಿಗಳನ್ನಾಡುವರು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಮೃತಧಾರೆ ಸಂಚಿಕೆ ಬಿಡುಗಡೆ ಮಾಡಲಿದ್ದು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯ ಶಿಕ್ಷಕ ಟಿ.ರಮೇಶ್ ಪ್ರಾಸ್ತವಿಕ ನುಡಿಗಳನ್ನಾಡುವರು ಎಂದು ಹೇಳಿದರು.
ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ವಿ.ಪರಿಷತ್ ಸದಸ್ಯ ಕೆ.ವಿವೇಕಾನಂದ, ಶಾಸಕ ಹೆಚ್.ಟಿ.ಮಂಜು, ನಗರಸಭೆ ಅಧ್ಯಕ್ಷ ಪ್ರಕಾಶ್ (ನಾಗೇಶ್), ಉಪಾಧ್ಯಕ್ಷ ಅರುಣ್ಕುಮಾರ್, ಮೈಷುಗರ್ ವ್ಯವಸ್ಥಾಪಕ ನಿರ್ದೇಶಕಿ ಬಿ.ಎನ್.ವೀಣಾ ಭಾಗವಹಿಸಲಿದ್ದಾರೆ. ಮಧ್ಯಾಹ್ನ ೨ ರಿಂದ ೩ ಗಂಟೆ ವರೆಗೆ ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರಗೌಡ ಅಧ್ಯಕ್ಷತೆಯಲ್ಲಿ ಶೈಕ್ಷಣಿಕ ವಿಚಾರಗೋಷ್ಠಿ ನಡೆಯಲಿದ್ದು, ಹಿರಿಯ ವಿದ್ಯಾರ್ಥಿಗಳಾದ ಡಾ.ಎಂ.ಮಾದಯ್ಯ, ಡಾ.ಎನ್.ಎನ್.ಪ್ರಹ್ಲಾದ್, ಡಾ.ಕೆಂಪಯ್ಯ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಎಂ.ಎಸ್.ಮನ್ನಾರ್ಕೃಷ್ಣರಾವ್ ವಿಚಾರ ಮಂಡನೆ ಮಾಡಲಿದ್ದಾರೆ ಎಂದರು.
ಸಂಜೆ.೦೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಮಾರೋಪ ಭಾಷಣ ಮಾಡುವರು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅಧ್ಯಕ್ಷತೆ ವಹಿಸುವರು. ಶಾಸಕ ರವಿಕುಮಾರ್ ಗೌಡ ಬಹುಮಾನ ವಿತರಣೆ ಮಾಡುವರು, ಶಾಲೆಯ ಸಂಚಿಕೆ ಲೇಖಕರಿಗೆ, ದಾನಿಗಳಿಗೆ ಹಾಗೂ ಶಾಲೆಯ ನಿವೃತ್ತ ಶಿಕ್ಷಕರು, ಸಿಬ್ಬಂಧಿವರ್ಗದವರಿಗೆ ಶಿವಲಿಂಗಯ್ಯ ಅವರು ಗೌರವ ಸಮರ್ಪಣೆ ಮಾಡುವರು. ಮುಕ್ಯ ಅತಿಥಿಗಳಾಗಿ ಶಾಸಕರುಗಳಾದ ಕೆ.ಎಂ.ಉದಯ್, ನರೇಂದ್ರಸ್ವಾಮಿ, ರಮೇಶ್ಬಾಬು, ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ, ಮಧು.ಜಿ.ಎಂ, ಎಂಡಿಸಿಸಿ ಅಧ್ಯಕ್ಷ ಕೆ.ಸಿ.ಜೋಗೀಗೌಡ, ಮಾಜಿ ಶಾಸಕ ಎಂ.ಶ್ರೀನಿವಾಸ್, ನಗರಸಭಾ ಸದಸ್ಯ ಪೂರ್ಣಚಂದ್ರ ಉಪಸ್ಥಿತರಿರಲಿದ್ದಾರೆ ನಂತರ ಕಿಕ್ಕೇರಿ ಕೃಷ್ಣಮೂರ್ತಿ ತಂಡದಿಂದ ಸುಗಮ ಸಂಗೀತ ಗಾಯನ, ಶಾಲಾ ಮಕ್ಕಳಿಂದ ವಿವಿಧ ಮನರಂನಾ ಕಾರ್ಯಕ್ರಮ ನಡೆಯಲಿವೆ ಎಂದು ವಿವರಿಸಿದರು.
ಅಂದು ಬೆಳಿಗ್ಗೆ ೦೯ರಿಂದ ಮಧ್ಯಾಹ್ನ ೦೧ ರವರೆಗೆ ಶಾಲೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಮೈಷುಗರ್ ಪ್ರೌಢಶಾಲೆ ಅಮೃತ ಮೋಹತ್ಸವ ಆಚರಣೆ ಸಮಿತಿಯ ಕಾರ್ಯದರ್ಶಿ ಟಿ.ರಮೇಶ್, ಮೈಷುಗರ್ ಪ್ರೌಢಶಾಲೆ ಶ್ರೇಯೋಭಿವೃದ್ಧಿ ಹಿರಿಯ ವಿದ್ಯಾರ್ಥಿಗಳ ಸಂಘದ ಬಿ.ಟಿ.ಜಯರಾಂ, ಖಜಾಂಚಿ ಜಿ.ಸತ್ಯನಾರಾಯಣರಾವ್, ಸತ್ಯನಾರಾಯಣದೇವ, ಟಿ.ಹೆಚ್.ವಿಶಾಲಾಕ್ಷಿ ಇದ್ದರು.
5th December 2024
ಸಮ್ಮೇಳನಕ್ಕೆ ಆಗಮಿಸುವವರಿಗೆ ಸೂಕ್ತ ರೀತಿಯಲ್ಲಿ ವಸತಿ ವ್ಯವಸ್ಥೆ
ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣದಲ್ಲಿ ವಾಸ್ತವ್ಯಕ್ಕೆ ಸಿದ್ಧತೆ; ಹೋಟಲ್, ಲಾಡ್ಜ್, ವಸತಿ ನಿಲಯ, ಕಲ್ಯಾಣ ಮಂಟಪಗಳ ಕಾಯ್ದಿರಿಸುವಿಕೆ
ಮಂಡ್ಯ, (ಕರ್ನಾಟಕ ವಾರ್ತೆ)
ಮಂಡ್ಯದಲ್ಲಿ ಡಿಸೆಂಬರ್ 20, 21, ಮತ್ತು 22ರಂದು ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಗರಿ ಮಂಡ್ಯದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಆತಿಥ್ಯಕ್ಕೆ ಹೆಸರಾಗಿರುವ ಮಂಡ್ಯ ದೇಶ, ವಿದೇಶಗಳಿಂದ ಹಾಗೂ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಗಣ್ಯರು, ನೋಂದಾಯಿತ ಪ್ರತಿನಿಧಿಗಳು ಹಾಗೂ ಸಾಹಿತ್ಯಾಸಕ್ತರ ಆತಿಥ್ಯಕ್ಕೆ ಎಲ್ಲ ರೀತಿಯಲ್ಲೂ ತಯಾರಾಗುತ್ತಿದೆ.
ಮೂರು ದಿನಗಳ ಕಾಲ ನಡೆಯಲಿರುವ ನುಡಿ ಜಾತ್ರೆಗೆ ಆಗಮಿಸುವವರ ವಾಸ್ತವ್ಯಕ್ಕೆ ಮಂಡ್ಯ, ಮದ್ದೂರು ಮತ್ತು ಶ್ರೀರಂಗಪಟ್ಟಣದಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿದ್ದು ಈ ಸಂಬಂಧ ಈಗಾಗಲೇ ಹೋಟೆಲ್, ಲಾಡ್ಜ್, ವಸತಿ ನಿಲಯಗಳು, ಕಲ್ಯಾಣ ಮಂಟಪಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಅಂದಾಜು 10 ರಿಂದ 15 ಸಾವಿರದಷ್ಟು ಗಣ್ಯರು, ಜನಪ್ರತಿನಿಧಿಗಳು, ಮಾಧ್ಯಮ ಮಿತ್ರರು ಹಾಗು ಕನ್ನಡ ಪ್ರೇಮಿಗಳು ನುಡಿ ಹಬ್ಬಕ್ಕೆ ಆಗಮಿಸುವ ನಿರೀಕ್ಷೆಯಿದ್ದು ಇವರ ವಾಸ್ತವಕ್ಕಾಗಿ ಹೋಟೆಲ್, ಲಾಡ್ಜ್ ಮತ್ತು ಕಲ್ಯಾಣಮಂಟಪಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಉತ್ತಮ ರೀತಿಯ ಶೌಚಾಲಯ ವ್ಯವಸ್ಥೆ ಜೊತೆಗೆ ನೀರಿನ ಸಮಸ್ಯೆ ಉಂಟಾಗದ ರೀತಿಯಲ್ಲಿ ಕ್ರಮವಹಿಸಲು ಜಿಲ್ಲಾಡಳಿತ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.
ಮಂಡ್ಯ, ಮದ್ದೂರು ಮತ್ತು ಶ್ರೀರಂಗಪಟ್ಟಣದಲ್ಲಿನ 30 ಕಲ್ಯಾಣ ಮಂಟಪಗಳು, 16 ಸಮುದಾಯ ಭವನಗಳು, 37 ವಸತಿ ನಿಲಯಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಮಂಡ್ಯದ ಪಿಇಎಸ್ ಶಿಕ್ಷಣ ಸಂಸ್ಥೆ, ಕೊಮ್ಮೇರಹಳ್ಳಿಯಲ್ಲಿನ ವಿಶ್ವಮಾನವ ಶಿಕ್ಷಣ ಸಂಸ್ಥೆ ಹಾಗೂ ಯಲಿಯೂರಿನಲ್ಲಿನ ಅನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.
ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳ ನೋಂದಣಿಗೆ ಇದೇ ಮೊದಲ ಬಾರಿಗೆ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನೋಂದಾಯಿತ ಪ್ರತಿನಿಧಿಗಳಿಗೆ ವಸತಿ ಸ್ಥಳದ ಸಂಪೂರ್ಣ ವಿವರವನ್ನು ಅವರ ಮೊಬೈಲ್ ಗೆ ಕಳುಹಿಸಲಾಗುತ್ತದೆ. ವಾಸ್ತವ್ಯದ ಸ್ಥಳದ ಲೊಕೇಷನ್ ಸಹ ಒಳಗೊಂಡ ಸಂಪೂರ್ಣ ಮಾಹಿತಿಯನ್ನು ನೋಂದಾಯಿತ ಪ್ರತಿನಿಧಿಗಳ ಮೊಬೈಲ್ ಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಎ, ಬಿ ಮತ್ತು ಸಿ ಶ್ರೇಣಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಿಯೂ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಅಣಿಯಾಗಿದೆ.
ನೋಂದಾಯಿತ ಪ್ರತಿನಿಧಿಗಳಿಗೆ ಸಮ್ಮೇಳನ ನಡೆಯುವ ಸ್ಥಳದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ವಾಸ್ತವ್ಯ ಸ್ಥಳದಿಂದ ಸಮ್ಮೇಳನದ ಸ್ಥಳಕ್ಕೆ ತೆರಳಲು ಉಚಿತ ಬಸ್ ವ್ಯವಸ್ಥೆ ಕೂಡ ಕಲ್ಪಿಸಲಾಗುತ್ತಿದೆ. ಕರ್ತವ್ಯ ನಿಯೋಜಿತವಾಗಿ ಅನ್ಯ ಜಿಲ್ಲೆಗಳಿಂದ ಆಗಮಿಸುವ ಸಿಬ್ಬಂದಿ, ಅಧಿಕಾರಿಗಳು, ಪೊಲೀಸರೆಲ್ಲರಿಗೂ ಉಳಿದುಕೊಳ್ಳಲು ಸೂಕ್ತ ರೀತಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಎಲ್ಲಿಯೂ ಆಹಾರ, ವಸತಿ, ಶೌಚಾಲಯದ ವ್ಯವಸ್ಥೆಯಲ್ಲಿ ಚ್ಯುತಿ ಬಾರದ ರೀತಿಯಲ್ಲಿ ಕ್ರಮಕೈಗೊಳ್ಳಲು ಮುಂದಾಗಿದೆ.
ಸಮ್ಮೇಳನಕ್ಕೆ ಆಗಮಿಸುವವರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಹೆಲ್ತ್ ಡೆಸ್ಕ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುತ್ತಿದ್ದು ನುಡಿ ಹಬ್ಬಕ್ಕೆ ಆಗಮಿಸುವವರ ಆತಿಥ್ಯದಲ್ಲಿ ಎಲ್ಲೂ ಲೋಪವಾಗದ ರೀತಿಯಲ್ಲಿ ಅತಿಥಿಗಳನ್ನು ಸತ್ಕರಿಸಲು ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಮಂಡ್ಯದಲ್ಲಿ ಜರುಗಲಿರುವ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕಂಕಣಬದ್ಧವಾಗಿದೆ.
ಕೋಟ್..
ಮಂಡ್ಯದ ಜನ ಹೃದಯ ಶ್ರೀಮಂತಿಕೆ, ಆತಿಥ್ಯಕ್ಕೆ ಹೆಸರುವಾಸಿ. ಮೂರನೇ ಬಾರಿಗೆ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಜಿಲ್ಲೆಯ ಹೆಮ್ಮೆ, ಗರಿಮೆಯನ್ನು ಕಾಪಾಡುವುದು ನಮ್ಮ ಕರ್ತವ್ಯ. ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಉಳಿದುಕೊಳ್ಳಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲೂ ಲೋಪವಾಗದಂತೆ ನೋಡಿಕೊಳ್ಳಲಾಗುವುದು. ಅತಿಥಿ ದೇವೋಭವ. ಸಮ್ಮೇಳನಕ್ಕೆ ಆಗಮಿಸುವ ಎಲ್ಲರನ್ನೂ ಗೌರವದಿಂದ ಕಾಣಲಾಗುವುದು. ವಾಸ್ತವ್ಯಕ್ಕೆ ಏನೂ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು. ಈಗಾಗಲೇ ಹೋಟೆಲ್, ಲಾಡ್ಜ್ ಗಳನ್ನು ಬುಕ್ ಮಾಡಲಾಗಿದೆ. ಸರ್ಕಾರ, ಜಿಲ್ಲಾಡಳಿತ, ಕಸಾಪ ಒಗ್ಗೂಡಿ ಕೆಲಸ ಮಾಡುತ್ತಿದ್ದು ಮಂಡ್ಯ ಸಾಹಿತ್ಯ ಸಮ್ಮೇಳನ ಇತಿಹಾಸದ ಪುಟದಲ್ಲಿ ದಾಖಲಾಗುವ ರೀತಿಯಲ್ಲಿ ನೋಡಿಕೊಳ್ಳಲಾಗುವುದು.
-ರವಿಕುಮಾರ್, ಶಾಸಕರು ಹಾಗೂ ವಸತಿ ಸಮಿತಿ ಅಧ್ಯಕ್ಷರು