
8th January 2025
ಮಂಡ್ಯ: ಭತ್ತ ಖರೀದಿ ಕೇಂದ್ರವನ್ನು ಶೀಘ್ರವಾಗಿ ತೆರೆಯದೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಧೋರಣೆ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಬಳಿ ಪ್ರತಿಭಟನೆ ಮಾಡಿದರು.
ಜಿಲ್ಲಾಧಿಕಾರಿ ಕಛೇರಿ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿ ಕಛೇರಿ ಎದುರು ಭತ್ತ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಭತ್ತ ಖರೀದಿ ಕೇಂದ್ರವನ್ನು ಜನವರಿ ತಿಂಗಳು ಬಂದರೂ ತೆರೆಯದೆ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಇದರಿಂದಾಗಿ ದಲ್ಲಾಳಿಗಳು ಕ್ವಿಂಟಾಲ್ ಭತ್ತವನ್ನು ೧೮೦೦ ರೂ. ನಿಂದ ೨೦೦೦ ರೂ.ಗೆ ಖರೀದಿ ಮಾಡುತ್ತಿದ್ದಾರೆ. ಈ ರೀತಿ ರೈತರ ಅಸಹಾಯಕತೆಯನ್ನು ದುರುಪಯೋಗಪಡಿಸಿ ಕೊಳ್ಳುವವರ ಮೇಲೆ ಕಾನೂನು ಕ್ರಮ ಜರುಗಿಸಲು ಜಿಲ್ಲಾಡಳಿತ ಹಾಗೂ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸುತ್ತದೆ.
ಭತ್ತ ಖರೀದಿ ಕೇಂದ್ರ ತೆರೆಯುವ ಸಲುವಾಗಿ ಭತ್ತ ಸಾಗಿಸಲು ಕ್ರೋನ್ಸ್ ಪೋರ್ಟ್ ಟೆಂಡರ್ ಸಹ ಕರೆದಿಲ್ಲ ಹಾಗೂ ಖರೀದಿಗೆ ಸಂಬಂಧಪಟ್ಟ ಸಾಪ್ಟವೇರ್ ಸಹ ತಯಾರಿಸಿಲ್ಲ. ಈ ಎಲ್ಲಾ ಬೆಳವಣಿಗಗಳನ್ನು ನೋಡಿದರೆ ರಾಜ್ಯ ಸರ್ಕಾರಕ್ಕೆ, ಭತ್ತ ಖರೀದಿ ಮಾಡಿ ರೈತರಿಗೆ ಸಹಾಯ ಮಾಡುವ ಮನಸ್ಥಿತಿ ಇಲ್ಲವಾಗಿದೆ ಎಂದೆನಿಸುತ್ತದೆ ಎಂದು ಸಂಶಯ ವ್ಯಕ್ತಪಡಿಸಿದರು.
ಕೇರಳದ ಎಡರಂಗ ಸರ್ಕಾರ ಭತ್ತ ಬೆಳೆಯಲು ರೈತರಿಗೆ ಎಕರೆಗೆ ೧೦,೦೦೦ ರೂ. ಪ್ರೋತ್ಸಾಹ ಧನ ಮತ್ತು ಕ್ವಿಂಟಾಲ್ ಭತ್ರಕ್ಕೆ ಬೆಂಬಲ ಬೆಲೆಯ ಜೊತೆಗೆ ಹೆಚ್ಚುವರಿಯಾಗಿ ೮೦೦ ರೂ.ಗಳನ್ನು ನೀಡುವುದರ ಮೂಲಕ ೩೧೦೦ ರೂಗೆ ಖರೀದಿ ಮಾಡುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಕ್ವಿಂಟಾಲ್ ಭತ್ತಕ್ಕೆ ೩೦೦೦ ರೂ. ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ಕೃಷಿ ಮಂತ್ರಿಗಳು ನಮ್ಮ ಜಿಲ್ಲೆಯವರೆ ಎಂಬ ಖುಷಿ ರೈತರಿಗೆ ಇತ್ತು ಆದರೆ ಕೃಷಿ ಮಂತ್ರಿಗಳು ಹುಸಿ ಮಂತ್ರಿಗಳಾಗಿದ್ದಾರೆ. ಅಕಾಲಿಕ ಮಳೆ ಬಂದು ಭತ್ತ ಬೆಳೆಗಾರರು ನಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ಜಿಲ್ಲಾಡಳಿತ ನಷ್ಠದ ವರದಿ ಪಡೆದುಕೊಂಡು ಸರ್ಕಾರಕ್ಕೆ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ಕೊಡಿಸಲಿಲ್ಲ ಎಂದು ದೂಡಿದರು.
ಕೂಡಲೇ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಶೀಘ್ರವಾಗಿ ಭತ್ತ ಖರೀದಿ ಕೇಂದ್ರವನ್ನು ತೆರೆಯಬೇಕು. ಕ್ವಿಂಟಾಲ್ ಭತ್ತಕ್ಕೆ ೩೦೦೦ ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು. ಕೇರಳದ ಎಡರಂಗ ಸರ್ಕಾರದ ಮಾದರಿಯಲ್ಲಿ ಎಕರೆಗೆ ೧೦,೦೦೦ ರೂ. ಪ್ರೋತ್ಸಾಹ ಧನ ಮತ್ತು ಹೆಚ್ಚುರಿಯಾಗಿ ಬೆಂಬಲ ಬೆಲೆಯ ಜೊತೆಗೆ ಕ್ರಿಂಟಾಲ್ಗೆ ೭೦೦ ರೂ. ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿರುವ ಖಾಸಗಿ ದಲ್ಲಾಳಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಚಂಡಮಾರುತದ ಮಳೆಹಾನಿಗೆ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಎ.ಎಲ್.ಭರತ್ ರಾಜ್, ಸಹ ಸಂಚಾಲಕ ಎನ್.ಲಿಂಗರಾಜ ಮೂರ್ತಿ, ಮಹದೇವು, ಸುನೀಲ್, ಶಿವಕುಮಾರ್, ಗುರುಸ್ವಾಮಿ ಸೇರಿದಂತೆ ಹಲವರಿದ್ದರು.