21st January 2025
ಜನಪದ ಸಾಹಿತ್ಯದ ತಾಯಿ ಬೇರು: ಹಮೀದಾ ಬೇಗಂ ದೇಸಾಯಿ
ಪೃಥ್ವಿ ಫೌಂಡೇಶನ್ ದಿಂದ " ಜಾನಪದ ಸಂಭ್ರಮ" ಕಾರ್ಯಕ್ರಮ
ಬೆಳಗಾವಿ: ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ ಅತ್ಯಂತ ಪುರಾತನವಾಗಿದ್ದು, ಜನಪದ ಸಾಹಿತ್ಯ ಜನಪದ ಸಾಹಿತ್ಯ ಶಿಷ್ಟ ಸಾಹಿತ್ಯದ ತಾಯಿ ಬೇರಾಗಿದೆ. ಅದನ್ನು ಯುವ ಪೀಳಿಗಿಗೆ ಪರಿಚಯಿಸುವ, ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸದಸ್ಯರಾದ ಹಮೀದಾ ಬೇಗಂ ದೇಸಾಯಿ ಅಭಿಪ್ರಾಯ ಪಟ್ಟರು
ಇಲ್ಲಿನ ಕನ್ನಡ ಸಾಹಿತ್ಯ ಭವದಲ್ಲಿ ಶನಿವಾರ ಪೃಥ್ವಿ ಫೌಂಡೇಶನ್ ವತಿಯಿಂದ ಆಯೋಜಿಸಲಾದ " ಜಾನಪದ ಸಂಭ್ರಮ" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ನಮ್ಮ ನಾಡಿನ ಜೀವಾಳ, ನಮ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಪ್ರಯತ್ನ ನಿರಂತರವಾಗಿ ನಡೆಯಬೇಕಿದೆ. ಜನರ ಬಾಯಿಂದ ಬಾಯಿಗೆ ಹರಡುವ ಜನಪದ ಅತ್ಯಂತ ಸರಳ ಶೈಲಿಯಲ್ಲಿ ಎಲ್ಲರ ಮನಮುಟ್ಟುತ್ತವೆ ಎಂದು ಹೇಳಿದರು.
ಜನಪದ ತ್ರಿಪದಿಗಳನ್ನು ಹಾಡುತ್ತಾ ಅವುಗಳ ವಿಶಿಷ್ಠ ರೀತಿಯಲ್ಲಿ ನೀತಿ-ತತ್ವಗಳನ್ನು ಭೋಧಿಸುತ್ತಾ ಸ್ವಾಸ್ಥ್ಯ ಸಮಾಜವನ್ನು ನಿಮಿ೯ಸುವಲ್ಲಿ ಜಾನಪದ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ ಎಂದರು.
ಜಯಶೀಲಾ ಬ್ಯಾಕೋಡ್ ಅವರು ಮಾತನಾಡಿ, ಪೃಥ್ವಿ ಫೌಂಡೇಶನ್ ದಿಂದ ಸಾಮಾಜಿಕ ಪ್ರಗತಿ-ಪರ ಕಾರ್ಯಗಳನ್ನು ಆಯೋಜಿಸುತ್ತಿರುವುದು ಸಂತಸವಾಗಿದೆ. ಸಂಸ್ಕೃತಿಯನ್ನು ಬೆಳೆಸುವುದು ನಮ್ಮ ಹೊಣೆಯಾಗಿದೆ. ಮುಂದಿನ ದಿನಗಳಲ್ಲಿ ಪೃಥ್ವಿ ಫೌಂಡೇಶನ್ ಅಭಿವೃದ್ಧಿಯತ್ತ, ಹೆಮ್ಮರವಾಗಿ ಬೆಳೆಯಲ್ಲಿ ಎಂದು ಹಾರೈಸಿದರು.
ಪೃಥ್ವಿ ಫೌಂಡೇಶನ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಗೈದಿರುವ ಜಯಶೀಲಾ ಬ್ಯಾಕೋಡ್, ಗಿರಿಜಾ ಮುಳಗುಂದ, ಬಾಳಗೌಡ ದೊಡಬಂಗಿ, ಗುರುಗೌಡ ಮಲಗೌಡ ಪಾಟೀಲ ಅವರಿಗೆ ಅನುಪಮ ಸೇವಾರತ್ನ ಹಾಗೂ ಡಾ. ಬಸನಗೌಡ ಬಿ. ಪಾಟೀಲ ಅವರಿಗೆ ಅನುಪಮ ಜ್ಞಾನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪೃಥ್ವಿ ಫೌಂಡೇಶನ್ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಡಾ. ಹೇಮಾವತಿ ಸೊನೊಳ್ಳಿ ಅಧ್ಯಕ್ಷತೆ ವಹಿಸಿದರು. ರತ್ನಪ್ರಭಾ ಬೆಲ್ಲದ , ಜ್ಯೋತಿ ಮಾಳಿ ,ವಾಸಂತಿ ಮೇಳೆದ, ದ್ರಾಕ್ಷಾಯಿಣಿ ಕಾಪಸೆ, ಸುನಂದಾ ಎಮ್ಮಿ, ಲಲಿತಾ ಪರ್ವತರಾವ, ಶಾಲಿನಿ ಬೆನಿವಾರ, ಸುನೀತಾ ನಂದೆಣ್ಣವರ, ಅನ್ನಪೂರ್ಣಾ ಹಿರೇಮಠ, ದಾನಮ್ಮ ಅಂಗಡಿ, ಸುನೀತಾ ಸೊಲ್ಲಾಪುರೆ, ಮಹಾನಂದಾ ಪರಶೆಟ್ಟಿ , ಅಕ್ಕಮಹಾದೇವಿ ಹುಲಗಬಾಳಿ,ಅಕ್ಕಮಹಾದೇವಿ ತೆಗಿ ಭಾರತಿ ಮಠದ , ರೇಖಾ ಶ್ರೀನಿವಾಸ , ಪ್ರೇಮಾ ಪಾನಶೆಟ್ಟಿ, ರಂಜನಾ ಪಾಟೀಲ , ಅನಿತಾ ಮಾಲಗತ್ತಿ, ಅಂಜನಾ, ಸ. ರಾ. ಸುಳಕುಡೆ, ಬನಶಂಕರಿ, ಬಾಳಪ್ಪಾ ಪಾಟೀಲ, ಸಂಘದ ಕಾರ್ಯದರ್ಶಿ ಶೈಲಜಾ ಹಿರೇಮಠ ಸ್ವಾಗತಿಸಿದರು. ಮಹಾದೇವಿ ಹಿರೇಮಠ, ಪಾರ್ವತಿ ಹಿರೇಮಠ ಗಣ್ಯರನ್ನು ಸ್ವಾಗತಿಸಿದರು. ಇಂದಿರಾ ಮೋಟೆಬೆನ್ನೂರ ಪರಿಚಯಿಸಿದರು. ಮೀನಾಕ್ಷಿ ಸೂಡಿ ಪ್ರಾರ್ಥಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ಭವನೇಶ್ವರಿ ಪೂಜೇರಿ ವಂದಿಸಿದರು.
29th December 2024
ಡಾ. ಪ.ಗು .ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ, ಬೆಳಗಾವಿ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ ಆಧುನಿಕ ವಚನಗಳ ಕುರಿತು. ಡಾ ಅನ್ನಪೂರ್ಣ ಹಿರೇಮಠ ಅವರಿಂದ ಜರುಗಿತು .ಅನ್ನಪೂರ್ಣ ಹಿರೇಮಠ ಅವರು ಮಾತನಾಡಿ ಸಮಾಜದ ಮತ್ತು ಮನುಕುಲದ ಉದ್ಧಾರಕ್ಕಾಗಿ ೧೨ ನೇ ಶತಮಾನದಲ್ಲಿ ವಚನ ಕ್ರಾಂತಿಯೇ ಆಗಿದೆ. ನಮ್ಮ ಮನಸ್ಸಿಗೆ ತಾಳ್ಮೆ ಅತೀ ಮುಖ್ಯ ,ಅಚಲತೆಯಿಂದ ಹಿಡಿದ ಕಾರ್ಯ ಮುಗಿಸುವ ಛಲಬೇಕು. ವಿಚಲಿತನಾಗಬಾರದು ಏನೇ ಬಂದರೂ ಮಾಡಿ ಮುಗಿಸುವೆನೆಂಬ ದೃಢ ಸಂಕಲ್ಪವಿದ್ದರೆ ಎಂತಹದನ್ನು ಸಾಧಿಸಬಲ್ಲ. ದೇವನಾಮಸ್ಮರಣೆ ನಿತ್ಯ ಸತ್ಯವಾಗಬೇಕು. *ನುಡಿದಂತೆ ನಡೆ ಇದೇ ಜನ್ಮ ಕಡೆ* ಎಂಬ ಶರಣರ ನುಡಿಯಂತೆ ನಡೆದು ತೋರುವ ಧೀರತೆ ಎಲ್ಲರಲ್ಲಿ ಬರಬೇಕು. ಶಾಲೆಗಳಲ್ಲಿ ಪ್ರಾರ್ಥನೆ ವಾರಕ್ಕೆ ಒಂದು ದಿನದಲ್ಲಿ ಒಂದು ಗಂಟೆಯಾದರೂ ವಚನಗಳಿಂದ ಜರುಗಬೇಕು ಎಂದು ಅಭಿಪ್ರಾಯಪಟ್ಟರು. ಒಗ್ಗಟ್ಟನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ನಾವು ಏನೇ ಮಾಡಿದರೂ ಒಗ್ಗಟ್ಟಿನಿಂದ ಯಾವ ಆಸೆ ದುರಾಸೆಗೆ ಬಲಿಯಾಗದೆ ಒಂದಾಗಿ ಮಾಡಿದರೆ ಸಫಲವಾಗುವುದರಲ್ಲಿ ಎರಡು ಮಾತಿಲ್ಲ.ಮತ್ತು ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಸಂಸ್ಕಾರವಂತ ನಾಗರಿಕರ ನಿರ್ಮಾಣ ಸಂಸ್ಕಾರವಂತ ಮನಗಳಿಂದ ಮಾತ್ರ ಸಾಧ್ಯ ಸಂಸ್ಕಾರವನ್ನು ಕಲಿಸಿದರೆ ಸಮಾಜ ಸುಸಂಸ್ಕೃತ ನಾಗರಿಕನನ್ನು ಹೊಂದಬಲ್ಲದು ಎಂದು ಅಭಿಪ್ರಾಯಪಟ್ಟರು. ವಚನಗಳು ಆಧುನಿಕ ಪುರಾತನ ಎಂಬುದಿಲ್ಲ ಸಮಾಜದಲ್ಲಿಯ ಕಳೆ ಕೀಳಲು ಸಹಾಯಕವಾಗುವ ನುಡಿಮುತ್ತುಗಳೆಲ್ಲ ವಚನಗಳೇ ಆಗಿವೆ. ಹೀಗೆ ಇರಬೇಕು ಎಂದು ಉಪದೇಶ ಮಾಡುವುದಕ್ಕಿಂತ ನಾವು ಆದರ್ಶರಾಗಿ ಬಾಳಿ ತೋರಿದರೆ ತಾವಾಗಿಯೇ ಅನುಸರಿಸಿ ಬಾಳುತ್ತಾರೆ ಎಂದು ಹೇಳಿದರು.
ಮಹಾದೇವಿ ಅರಳಿಯವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಈರಣ್ಣ ದೇಯನ್ನವರ ಅಧ್ಯಕ್ಷೀಯ ನುಡಿಗಳನ್ನು ಆಡುತ್ತಾ ವಚನಗಳ ಅಧ್ಯಯನ ಎಲ್ಲರೂ ಮಾಡಬೇಕು ಪ್ರತಿಯೊಬ್ಬರಿಗೂ ಮನೆಮನೆಗೆ ಬಸವಣ್ಣನವರ ವಚನಗಳು ಮುಟ್ಟುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.ಮಂಗಲಾ ಜಿ. ಕಾಕತಿಕರ ದಾಸೋಹ ಸೇವೆ ನಡೆಸಿಕೊಟ್ಟರು.
ಶಂಕರ ಗುಡಸ, ಸದಾಶಿವ ದೇವರಮನಿ, ಶರಣ ಕರ್ಲಿಂಗನವರ, ಅನೀಲ ರಘಶೆಟ್ಟಿ, ಮಹಾಂತೇಶ ಮೆಣಸಿನಕಾಯಿ , ಬಸವರಾಜ ಕರಡಿಮಠ,ಸಿದ್ಧಪ್ಪ ಸಾರಾಪುರಿ,ವಿ.ಕೆ.ಪಾಟೀಲ,ಕರಿಕಟ್ಟಿ,ಆನ೦ದ ಕಕಿ೯,ಬಿ.ಪಿ.ಜೇವಣಿ, ಸುನೀಲ ಸಾಣಿಕೊಪ್ಪ, ಬಸವರಾಜ ಬಿಜ್ಜರಗಿ,ಶೇಖರ ವಾಲಿ ಇಟಗಿ,ಮಹದೇವ ಕೆ೦ಪಿಗೌಡರ,ವಿದ್ಯಾ ಕಕಿ೯,ಸುವರ್ಣ ತಿಗಡಿ,ಗುತ್ತಿಗೊಳಿ,ನೇತ್ರಾ ರಾಮಾಪೊರಿ,ಶಾಂತಾ ಕ೦ಬಿ, ಉಪಸ್ಥಿತರಿದ್ದರು. ಶರಣ ಶರಣೆಯರು ವಚನ ಗಾಯನ ಮಾಡಿದರು ಸಂಗಮೇಶ ಅರಳಿ ನಿರೂಪಿಸಿದರು.
25th December 2024
ಗಣಿತ ವಿಜ್ಞಾನದ ತಾಯಿ ಬೇರು : ಪ್ರಾಚಾರ್ಯ ಎಂ. ಜಿ. ಹೆಗಡೆ
ಗಣಿತ ವಿಜ್ಞಾನದ ತಾಯಿ ಬೇರು. ವೈಜ್ಞಾನಿಕ ಸಂಶೋಧನೆಯು ಗಣಿತದ ಮೇಲೆಯೇ ಅವಲಂಬಿಸಿದೆ ಎಂದು ಪ್ರಾಚಾರ್ಯ ಎಂ. ಜಿ. ಹೆಗಡೆ ಅವರು ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗಣಿತಶಾಸ್ತ್ರ ವಿಭಾಗವು ಡಿ. 23ರಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತಶಾಸ್ತ್ರ ದಿನಾಚರಣೆ ಮತ್ತು ಗಣಿತತಜ್ಞ ಶ್ರೀನಿವಾಸ ರಾಮಾನುಜನ್ ಜಯಂತಿಯ ನಿಮಿತ್ತ ಶ್ರೀನಿವಾಸ ರಾಮಾನುಜನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಜಗತ್ತಿನ ಶ್ರೇಷ್ಠ ಗಣಿತತಜ್ಞರಲ್ಲಿ ಶ್ರೀನಿವಾಸ ರಾಮಾನುಜನ್ ಅವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಗಣಿತ ಶಾಸ್ತ್ರಕ್ಕೆ ಅವರ ಕೊಡುಗೆ ಅಪಾರ. ಅವರು ಗಣಿತಕ್ಕೆ ಕೊಟ್ಟ ಕೊಡುಗೆಗಳಿಂದ ಜಗತ್ತು ಇಂದು ಅವರನ್ನು ಸ್ಮರಿಸಿಕೊಳ್ಳುತ್ತಿದೆ.
ಪ್ರಾಚೀನ ಭಾರತದಲ್ಲಿ ಕೂಡ ಗಣಿತ ಕ್ಷೇತ್ರಕ್ಕೆ ವಿಶೇಷವಾದ ಮನ್ನಣೆಯಿತ್ತು. ಆರ್ಯಭಟ, ಬ್ರಹ್ಮಗುಪ್ತ, ವರಹಮೀರರಂಥ ಮಹಾನ್ ಗಣಿತತಜ್ಞರು ಭಾರತವನ್ನು ಬೆಳಗಿದರು. ತಮ್ಮ ಬೌದ್ಧಿಕ ಸಂಪತ್ತಿನ ಮೂಲಕ ಜಗತ್ತಿನ ಗಣಿತಲೋಕದಲ್ಲಿ ಭಾರತದ ಸ್ಥಾನವನ್ನು ಅಜರಾಮರವಾಗಿ ಉಳಿಸಿದರು. ವಿದ್ಯಾರ್ಥಿಗಳಿಗೆ ಶ್ರೀನಿವಾಸ ರಾಮಾನುಜನ್ ಅವರ ವ್ಯಕ್ತಿತ್ವ ಸದಾ ಮಾದರಿಯಾಗಿರಲಿ ಎಂದು ಹೇಳಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿಜ್ಞಾನಕ್ಕೆ ಸಂಬಂಧಿಸಿದ ವಾಲ್ ಮ್ಯಾಗಜ್ಹಿನ್ ಬಿಡುಗಡೆ ಮಾಡಿದರು.
ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಆದಿನಾಥ ಉಪಾಧ್ಯೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಶ್ರೀನಿವಾಸ ರಾಮಾನುಜನ್ ಅವರ ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆಗಳು ಮತ್ತು ಅವರ ಜೀವನ ವೃತ್ತಾಂತವನ್ನು ವಿವರಿಸಿದರು. ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮೀ ಹಡಪದ ನಿರೂಪಿಸಿದರು, ಅಶ್ವಿನಿ ವಾಲಿ ಸ್ವಾಗತಿಸಿದರು, ಪೂಜಾ ಶಿವೋಲ್ಕರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
25th December 2024
ಎಂ.ಕೆ. ಹುಬ್ಬಳ್ಳಿಯ ಸರಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ವಿಶೇಷವಾಗಿ ಆಚರಣೆ
ಹುಬ್ಬಳ್ಳಿ: ಇಂದು ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಎಂ.ಕೆ. ಹುಬ್ಬಳ್ಳಿಯ ಸರಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ವೇಳೆ, ಎಲ್ಲ ವಿದ್ಯಾರ್ಥಿಗಳು ಗಣಿತದ ವಿವಿಧ ಕಲಿಕೋಪಕರಣಗಳನ್ನು ತಯಾರಿಸಿ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಕಲಿಕೋಪಕರಣಗಳ ಮೂಲಕ, ಗಣಿತ ಅಧ್ಯಯನವನ್ನು ಸರಳ, ಉತ್ಸಾಹಭರಿತ ಮತ್ತು ಆಸಕ್ತಿದಾಯಕವಾಗಿ ಮಾಡಿಕೊಳ್ಳಬಹುದೆಂಬ ಸಂದೇಶವನ್ನು ತೋರಿಸಲಾಯಿತು. ಈ ಕಾರ್ಯವು ಮಕ್ಕಳಲ್ಲಿ ಸೃಜನಶೀಲತೆಯನ್ನು ಉತ್ತೇಜಿಸಲು ಸಹಾಯವಾಯಿತು.
ಈ ಸಂದರ್ಭದಲ್ಲಿ, ಬ್ಲಾಕ್ ಸಂಪನ್ಮೂಲ ವ್ಯಕ್ತಿ (ಬಿ.ಆರ್.ಪಿ) ಶ್ರೀಮತಿ ಸ್ನೇಹಲ್ ಪೂಜಾರಿ ಉರ್ದು ಸಿ.ಆರ್.ಪಿ ವಸೀಮಾ ದಡವಾಡ, ಶಾಲೆಯ ಮುಖ್ಯ ಶಿಕ್ಷಕರು ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು.
ಅವರು ವಿದ್ಯಾರ್ಥಿಗಳ ಕಲಿಕೋಪಕರಣಗಳ ಪ್ರದರ್ಶನವನ್ನು ಪರಿಶೀಲಿಸಿ, ಅಭಿನಂದನೆಗಳನ್ನು ವ್ಯಕ್ತಪಡಿಸಿದರು. ಈ ಕಾರ್ಯವು ಮಕ್ಕಳು ಗಣಿತದಲ್ಲಿ ಆಸಕ್ತಿ ಹೆಚ್ಚಿಸಿಕೊಂಡು, ಆಕರ್ಷಕ ಮಾರ್ಗದಲ್ಲಿ ಕಲಿಕೆಗೆ ಪ್ರೇರಣೆ ನೀಡುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮವು ಮಕ್ಕಳಲ್ಲಿ ಗಣಿತದ ಮಹತ್ವ ಮತ್ತು ಶ್ರದ್ಧೆಯನ್ನು ಬಿತ್ತುವಲ್ಲಿ ಮಹತ್ವದ ಪಾತ್ರ ವಹಿಸಿತು.
22nd December 2024
ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ಗೆ ರಾಮತೀರ್ಥನಗರದಲ್ಲಿ ಅದ್ದೂರಿ ಸನ್ಮಾನ.
ಸ್ಟಾರ್ ಸುವರ್ಣ ವಾಹಿನಿಯ ಸುವರ್ಣೋತ್ಸವ ಕಾರ್ಯಕ್ರಮ.
ಬೆಳಗಾವಿ ೨೧- ಸ್ಟಾರ್ ಸುವರ್ಣ ದ ಸುವರ್ಣೋತ್ಸವ ಕಾರ್ಯಕ್ರಮಕ್ಕೆ ಬೆಳಗಾವಿ ರಾಮತೀರ್ಥ ನಗರದ ಸಂಕಲ್ಪ ಗಾರ್ಡನ್ ಹಾಲ್ ಗೆ ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ಕಾರ ಇಳಿದು ಕುಣಿ,ಕುಣಿಯುತ್ತ ಆಗಮಿಸುತ್ತಿದ್ದಂತೆ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ವತಿಯಿಂದ ಭವ್ಯಸನ್ಮಾನದೊಂದಿಗೆ ಸ್ವಾಗತ ನೀಡಿ ಗೌರವಿಸಲಾಯಿತು.
ವೇದಿಕೆಯ ಮುಂಬಾಗಿಲಿನಲ್ಲಿಯ ಸ್ವಾಗತ ಕಾಮನ ಎರಡೂ ಬದಿಯಲ್ಲಿ ನಿಂತಿದ್ದ ರಾಮತೀರ್ಥನಗರ ದ ಮಹಿಳಾ ಗೌರಿ ದಾಂಡಿಯಾ ಸಂಘದ ಮಹಿಳೆಯರು ಹೂ ಮಳೆಗರೆದು ಸಿಹಿ,ಕಹಿ ಚಂದ್ರುಗೆ ಸ್ವಾಗತಿಸಿದರಲ್ಲದೆ, ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಸುರೇಶ ಉರಬಿನಟ್ಟಿ, ಚಂದ್ರು ಅವರನ್ನು ಸನ್ಮಾನಿಸಿ ಗೌರವಿಸಿದರು . ಸುಮಾರು ೧ ಗಂಟೆಗೂ ಹೆಚ್ಚು ಕಾಲ ವೇದಿಕೆಯಲ್ಲಿ ವಿಧ, ವಿಧದ ಅಡುಗೆ ಮಾಡಿ ಕೈ ಚಾಲಕ ತೋರಿಸಿದರಲ್ಲದೆ, ಪ್ರೇಕ್ಷಕರ ಹಲವಾರು ಪ್ರಶ್ನೆಗಳಿಗೆ ಸ್ಪಂದಿಸಿ, ಅಭಿಮಾನಿ ಸಹೋದರಿಯರೊಂದಿಗೆ ಸ್ಟೆಪ್ ಹಾಕಿ ಜನ,ಮನ ರಂಜಿಸಿ ಮಾತನಾಡಿ, ನನಗೆ ಬೆಳಗಾವಿ ಭೆಟ್ಟಿ ಅತ್ಯಂತ ಖುಷಿ ತಂದಿದೆ. ನಿಮ್ಮೊಂದಿಗಿನ ಈ ಸಮಯ ಕಳೆಯುವ ಸಂದರ್ಭ ನನಗೊದಗಿ ಬಂದಿದ್ದು, ಕುಂದಾ ರುಚಿಸುವದಕ್ಕೇನೆ ಇಲ್ಲಿಗೆ ಬಂದಿದ್ದು ಎಂದರು.
ದಿಗ್ವಿಜಯ ಸಿದ್ನಾಳ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಚಂದ್ರು ಅವರೊಬ್ಬ ಕರ್ನಾಟಕದ ಜನ,ಮನ ಗೆದ್ದ ಮಹಾನ ಪಾಕ ಶಾಸ್ತ್ರದ ಕಲಾವಿದ ಅವರ ಬೆಳಗಾವಿ ಭೆಟ್ಟಿ ನಮಗೆಲ್ಲ. ಮಹಾದಾನಂದ ಉಂಟು ಮಾಡಿದೆ ಎಂದರಲ್ಲದೆ, ಉಪಸ್ತಿತರಿದ್ದ ಬೆಳಗಾವಿ ಜನರಿಗೆ ಸ್ವಾಗತ ಕೋರಿ ಅಭಿನಂದಿಸಿದರು.
ಸ್ಟಾರ್ ಸುವರ್ಣ ವಾಹಿನಿ ಯಿಂದ ಪ್ರಸಾರಗೊಳ್ಳುತ್ತಿರುವ ಅಸೆ, ಎಡೆಯೂರು ಸಿದ್ಧಲಿಂಗೇಶ, ಉಧೋ,ಉಧೋ ಯಲ್ಲಮ್ಮ, ಬೊಂಬಾಟ್ ಬಾಡೂಟ, ನಿನ್ನ ಜೊತೆ ನನ್ನ ಕಥೆ, ಶ್ರೀದೇವಿ ಮಹಾತ್ಮೆ ಮುಂತಾದ ಜನಪ್ರಿಯ ಧಾರವಾಹಿಗಳ ನಟ,ನಟಿಯರು ಹಾಡು, ಗುಂಪು ನ್ರತ್ಯ, ಮಿಮಿಕ್ರಿ ಗಳನ್ನು ಮಾಡುವುದರ ಮೂಲಕ ಜನ,ಮನ ರಂಜಿಸಿದರು. ಲಕ್ಷ್ಮೀ, ಆನಂದ ಅಂಗಡಿ, ನಿರೂಪಕರಾದ ಪ್ರೀತಮ್ ಕಾರ್ಯಕ್ರಮ ಅಚ್ಚು,ಕಟ್ಟಾಗಿ ನಿರ್ವಹಿಸಿದರು. ಈ ಸಂದರ್ಭದಲ್ಲಿ
ಅಭಿಮಾನಿಗಳು, ಮಹಿಳೆಯರು ಸೇರಿದಂತೆ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ .. ಕಮಿಟಿ ಸದಸ್ಯರಾದ ಕ್ರಷ್ಣಾ ಪಾಟೀಲ, ಪ್ರಹ್ಲಾದ ಹೊಳೆಯಾಚಿ, ಅರ್ಜುನ್ ಉರಬಿನಹಟ್ಟಿ, ಮಂಜುನಾಥ, ಪಾಟೀಲ, ಮಹೇಶ ಪಾಟೀಲ, ಆರ್.ಜಿ. ಮೆಳವಂಕಿ, ಬಸವರಾಜ ಗೌಡಪ್ಪಗೋಳ, ಎಸ್, ಸಿ ಕಮತ್, ಸೇರಿದಂತೆ ಸ್ಟಾರ್ ಸುವರ್ಣ ಟೀಮ್ ನ ತಾಂತ್ರಿಕ ಸಿಬ್ಬಂದಿ, ಕಿರು ತೆರೆ ನಟ, ನಟಿಯರು ಉಪಸ್ತಿತರಿದ್ದರು.
ವರದಿ, ಸುರೇಶ ಉರಬಿನಟ್ಟಿ
22nd December 2024
ಸಂಗೊಳ್ಳಿ ರಾಯಣ್ಣ ಕಾಲೇಜಿನ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಕ್ಷೇತ್ರ ಕಾರ್ಯ
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು 2024-25ರ ಶೈಕ್ಷಣಿಕ ಕ್ಷೇತ್ರಕಾರ್ಯಕ್ಕಾಗಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅಪ್ಪಣ್ಣ ಜಿರನಾಳ, ಡಾ. ಪ್ರೀತಿ ಪದಪ್ಪಗೊಳ ನೇತೃತ್ವದಲ್ಲಿ ಬೆಳಗಾವಿಯ ಮಹೇಶ್ ಫೌಂಡೇಶನ್ ಗೆ ಭೇಟಿ ನೀಡಿದರು. ಮಹೇಶ್ ಫೌಂಡೇಶನ್ ನ ಮುಖ್ಯಸ್ಥರಾದ ಮಹೇಶ ಜಾದವ್ ಹಾಗೂ ಅಲ್ಲಿನ ಮಕ್ಕಳೊಂದಿಗೆ ಯುವ ಜನಾಂಗದಲ್ಲಿ ಹರಡುತ್ತಿರುವ ಎಚ್. ಐ. ವಿ. ಹಾಗೂ ಮಕ್ಕಳ ಸಮಸ್ಯೆಯ ಕುರಿತು ಚರ್ಚಿಸಿದರು. ಅದನ್ನು ತಡೆಗಟ್ಟುವಲ್ಲಿ ಸಮಾಜದ ಪಾತ್ರ, ಯುವಜನತೆಯ ಸಾಮಾಜಿಕ ಜವಾಬ್ದಾರಿ ಕುರಿತು ಸಂವಾದ ನಡೆಸಿದರು.
ಮಹೇಶ್ ಫೌಂಡೇಶನ್ ನ ಮುಖ್ಯಸ್ಥರಾದ ಮಹೇಶ್ ಜಾದವ್ ತಮ್ಮ ಫೌಂಡೇಶನ್ ನಡೆದು ಬಂದ ದಾರಿ, ಅದರ ಉದ್ದೇಶ, ಸಮಾಜದಲ್ಲಿ ಎಚ್. ಐ. ವಿ. ಮಕ್ಕಳ ಬಗೆಗೆ ಇರುವ ಅಂದು ಮತ್ತು ಇಂದಿನ ಸಮಸ್ಯೆಗಳು, ಒಂದು ಸಂಘವನ್ನು ಕಟ್ಟಿ ಬೆಳೆಸುವಲ್ಲಿ ನಮ್ಮಗಳ ತ್ಯಾಗ, ವಿದ್ಯಾರ್ಥಿಗಳ ಜವಾಬ್ದಾರಿ ಇವುಗಳ ಕುರಿತು ನಮ್ಮೊಂದಿಗೆ ಹಂಚಿಕೊಂಡರು. ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರಕ್ಕಾಗಿ ಸಿದ್ಧ ಮಾಡಿಕೊಂಡು ಬಂದ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದುಕೋಂಡರು.
14th December 2024
ಕಲಾದಗಿ- ಗ್ರಂಥಾಲಯಗಳು ಮನುಷ್ಯನ ಜ್ಞಾನವನ್ನು ಹೆಚ್ಚಿಸುವ ಮತ್ತು ಅಮೂಲ್ಯ ಸಮಯವನ್ನು ಸದುಪಯೋಗಪಡಿಸುವ ಸಾಧನಗಳಾಗಿವೆ ಎಂದು ಕಲಾದಗಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಗ್ರಂಥಪಾಲಕ ಸಿ.ವಾಯ್.ಮೆಣಸಿನಕಾಯಿ ಹೇಳಿದರು.
ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಗ್ರಂಥಾಲಯ ವಿಜ್ಞಾನ ವಿಭಾಗದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಮಹತ್ವ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಾ ಇಂದು ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಯುವಕರು ಮೊಬೈಲ್ ಹಿಡಿದುಕೊಂಡು ಕಾಲಹರಣ ಮಾಡುತ್ತಿದ್ದಾರೆ. ತಮ್ಮ ಉಜ್ವಲ ಭವಿಷ್ಯಕ್ಕಾಗಿ ಗ್ರಂಥಾಲಯಕ್ಕೆ ಹೋಗಿ ಪುಸ್ತಕಗಳನ್ನು ಓದಿ ಜ್ಞಾನವನ್ನು ಪಡೆದುಕೊಳ್ಳಬಹುದು. ಪುಸ್ತಕದಿಂದ ಕಲಿತ ಜ್ಞಾನದಿಂದ ಸ್ಪರ್ಧಾತ್ಮಕ ಮತ್ತು ಉನ್ನತ ಪರೀಕ್ಷೆ ಬರೆದು ಯಶಸ್ಸು ಸಾಧಿಸಬಹುದೆಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಎಚ್.ಬಿ.ಮಹಾಂತೇಶ ಮಾತನಾಡುತ್ತಾ, ಒಂದು ಪುಸ್ತಕ ನೂರು ಸ್ನೇಹಿತರಿಗೆ ಸಮ ಎಂದು ಭಾವಿಸಲಾಗುತ್ತದೆ. ವಿದ್ಯಾರ್ಥಿಗಳ ಓದಿಗೆ ಗ್ರಂಥಾಲಯ ಅವಶ್ಯವಾಗಿವೆ. ಕಾಲೇಜಿನ ಗ್ರಂಥಾಲಯದಲ್ಲಿನ ಪುಸ್ತಕಗಳ ಬಳಕೆ ಮಾಡಿಕೊಂಡು ತಮ್ಮ ಜ್ಞಾನವನ್ನು ವೃದ್ದಿಸಿಕೊಳ್ಳಬೇಕೆಂದರು.
ಉಪನ್ಯಾಸಕಿ ಶ್ರಿದೇವಿ ಮುಂಡಗನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು, ಐಕ್ಯೂಎಸಿ ಸಂಚಾಲಕರಾದ ಪ್ರೊ.ಸರೋಜಿನಿ ಹೊಸಕೇರಿ ಸೇರಿದಂತೆ ಎಲ್ಲ ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕು.ಯಂಕಮ್ಮ ಸ್ವಾಗತಿಸಿದರು.ಕು.ಶುಷ್ಮಾ ಗುರಿಕಾರ ನಿರೂಪಿಸಿದರು.ಕು.ರೂಪಾ ಸಂಶಿ ವಂದಿಸಿದರು.
9th December 2024
*ಕಾಡು ಹಣ್ಣು ಮತ್ತು ದೇಶೀಯ ಹಣ್ಣುಗಳಿಗೆ ಪ್ರಾಧಾನ್ಯತೆ ನೀಡಿ- ಕಾಡು ಹಣ್ಣುಗಳ ವಿಶೇಷಜ್ಞ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಡಾ. ಎಚ್.ಎನ್.ಕೆಂಚರಡ್ಡಿ ಅಭಿಮತ*
ನಮ್ಮ ಊಟದ ತಟ್ಟೆಯಲ್ಲಿಯ ಸಸ್ಯಗಳ ಸಂಖ್ಯೆ ಕಡಿಮೆಯಾಗುತ್ತಿದೆಯೆಂದು ಮೇಘಾಲಯದ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕಾಡು ಹಣ್ಣುಗಳ ವಿಜ್ಞಾನಿ ಡಾ. ಎಚ್.ಎನ್.ಕೆಂಚರಡ್ಡಿಯವರು ಕಪ್ಪತಗಡ್ಡ ಶ್ರೀ ನಂದಿವೇರಿ ಸಂಸ್ಥಾನಮಠ ಪ್ರಾಯೋಜಿತ 7ನೆ ಚಾರಣ ಹಾಗೂ ಸಸ್ಯಾನುಭಾವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜಗತ್ತಿನಲ್ಲಿ ಮೂರು ಲಕ್ಷಕ್ಕೂ ಅಧಿಕ ಸಸ್ಯಗಳನ್ನು ಆಹಾರವಾಗಿ ಬಳಸಲು ಸಾಧ್ಯವಿದ್ದರೂ ನಾವು ಕೇವಲ ಮೂವತ್ತು ಸಸ್ಯಗಳಿಗೆ ನಮ್ಮ ಸೇವನೆಯನ್ನು ಸೀಮಿತಗೊಳಿಸಿದ್ದು ಅಪೌಷ್ಟಿಕತೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಕೇವಲ ಐದಾರು ಆಹಾರಧಾನ್ಯಗಳಿಗೆ ಸೀಮಿತಗೊಳಿಸಿರುವದು ಸರಿಯಾದ ಬೆಳವಣಿಗೆಯಲ್ಲ, ಕಡಿಮೆಯಾಗಿರುವ ಸಿರಿಧಾನ್ಯಗಳ ಬಳಕೆಯನ್ನು ವೃದ್ಧಿಸಿ ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.
ನಮ್ಮ ಹಿರಿಯರು ಸ್ಥಳೀಯವಾಗಿ ಲಭ್ಯವಿರುವ ಕಾಡು ಹಣ್ಣುಗಳನ್ನು ಸೇವಿಸುತ್ತಿದ್ದ ಕಾರಣ ರೋಗ ನಿರೋಧಕ ಶಕ್ತಿ ಹೊಂದಿರುತ್ತಿದ್ದರು. ನಾವು ವಿದೇಶಿ ಹಣ್ಣುಗಳ ವ್ಯಾಮೋಹಕ್ಕೆ ಸಿಲುಕಿ ಸ್ಥಳೀಯ ಹಣ್ಣು ಬೆಳೆಗಾರರಿಗೆ ಅನ್ಯಾಯವೆಸಗುತ್ತಿದ್ದೇವೆಯೆಂದೂ ಸಹ ಅಭಿಪ್ರಾಯಪಟ್ಟರು
ಧಾರವಾಡದ ವೀರಶೈವ ಲಿಂಗಾಯತ ಜಾಗೃತಿ ಸಮೀತಿಯ ಮಹಿಳಾ ಘಟಕದ ಮಹಾದೇವಿ ಕೊಪ್ಪದರವರು ಮಾತನಾಡಿ ನಶಿಸುತ್ತಿರುವ ಕಾಡು ಹಣ್ಣುಹಣ್ಣುಗಳ ಗಿಡಮರಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದ್ದು ಸಾವಿರಾರು ಕಾಡುಹಣ್ಣುಗಳ ಜೀವ ವೈವಿಧ್ಯತಾ ತಾಣವಾಗಿರುವ ಕಪಗುಡ್ಡದ ಸಂರಕ್ಷಣೆ ಮಾಡಿದರೆ ಕಾಡು ಹಣ್ಣುಗಳ ಪರಂಪರೆ ನಶಿಸದಂತೆ ತಡೆಯಬಹುದಾಗಿದ್ದು, ಅದಕ್ಕಾಗಿ ನಮ್ಮ ಸಮೀತಿಯ ಮಹಿಳಾ ಘಟಕವು ಯಾವುದೇ ಹೋರಾಟಕ್ಕೆ ಧುಮಕಲು ಸನ್ನದ್ಧವಾಗಿದೆಯೆಂದರು.
ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮೀತಿ ಅಧ್ಯಕ್ಷ ಶಂಕರ ಕುಂಬಿಯವರು ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಕಪ್ಪತಗುಡ್ಡದ ಸಂರಕ್ಷಣೆಗಾಗಿ ಮನವಿ ಸಲ್ಲಿಸಿರುವ ಕುರಿತು ಮಾಹಿತಿ ನೀಡಿದರು ಹಾಗೂ ಮುಂದಿನ ದಿನಗಳ ಕ್ರಿಯಾಯೋಜನೆಯನ್ನು ಸಭೆಯಲ್ಲಿ ಮಂಡಿಸಿದರು.
ಭಾಲಚಂದ್ರ ಜಾಬಶೆಟ್ಟಿ ಮಾತನಾಡುತ್ತಾ, ಕಪ್ಪತಗುಡ್ಡದೊಂದಿಗೆ ಸಮಸ್ತ ಕನ್ನಡಿಗರ ಭಾವ ಬಂಧ ಬೆಸುಗೆಗಾಗಿ ಕಪ್ಪತಗುಡ್ಡ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಹಗಲಿರುಳು ಶ್ರಮಿಸುತ್ತಿದ್ದು ನಾಗರಿಕ ಸಮಾಜ ಧನಾತ್ಮಕವಾಗಿ ಸ್ಪಂದಿಸುತ್ತಿರುವುದು ಕಪ್ಪತಗುಡ್ಡದ ಸಂರಕ್ಷಣೆಗಾಗಿ ಇಮ್ಮಡಿ ಬಲ ತಂದಿದೆಯೆಂದರು. ಶ್ರೀಮಠದಿಂದ ನಾಡು ನುಡಿ ಪರಿಸರ ಸಂರಕ್ಷಣೆಗಾಗಿ ಹಮ್ಮಿಕೊಳ್ಳಲಾಗುವ ದೀರ್ಘಾವಧಿ ಚಟುವಟಿಕೆಗಳ ವಿವರ ನೀಡಿದರು.
ಪೂಜ್ಯ ಶಿವಕುಮಾರ ಮಹಾಸ್ವಾಮಿಗಳ ಆಶೀರ್ವಚನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಮುದ್ದೇಬಿಹಾಳ, ಬಸವನಬಾಗೇವಾಡಿ ತಾಲೂಕುಗಳಿಂದ, ಧಾರವಾಡದಿಂದ ಆಗಮಿಸಿದ ಚಾರಣಿಗರು ಸಂಭ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಎಚ್.ಎನ್ ಕೆಂಚರಡ್ಡಿ, ಶಂಕರ ಕುಂಬಿ, ಮಹಾದೇವಿ ಕೊಪ್ಪದ, ಶಕುಂತಲಾ ಪಾಟೀಲ ಹಾಗೂ ಬಸ್ ಚಾಲಕ ಈಶ್ವರ ತಡಕೋಡರವರಿಗೆ ಗೌರವ ಸನ್ಮಾನ ನೀಡಲಾಯಿತು
ಪ್ರಶಾಂತ ಪಾಟೀಲ, ಶಕುಂತಲಾ ಪಾಟೀಲ, ರಾಜರಾಜೇಶ್ವರಿ ಹಿರೇಮಠ, ರತ್ನಾ ಕುಲಕರ್ಣಿ, ಸವಿತಾ ನಡಕಟ್ಟಿ, ದಾಕ್ಷಾಯಿಣಿ ಬಡಿಗೇರ, ಶೋಭಾ ಗರಗ ಹಾಗೂ ಇನ್ನಿತರರು ಭಾಗವಹಿಸಿದ್ದರು
ಭಾಲಚಂದ್ರ ಜಾಬಶೆಟ್ಟಿ
8th December 2024
ಬೆಳಗಾವಿ: ಜೈನ ಸಮಾಜದ ವಿವಿಧ ಬೇಡಿಕೆ ಈಡೇರಿಸುವಂತೆ ಡಿ.9 ರಂದು ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಮಸ್ತ ಜೈನ ಅಲ್ಪಸಂಖ್ಯಾತರ ಹೋರಾಟದ ಸಮಿತ ಮುಖಂಡ ವಿನೋದ್ ದೊಡ್ಡಣ್ಣವರ ಹೇಳಿದರು.
ಭಾನುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರಕಾರ ಜೈನ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಮಾಡಿ ಪ್ರತಿ ವರ್ಷ 200 ಕೋಟಿ ಜೈನ ನಿಗಮ ಅಭಿವೃದ್ಧಿಗೆ ಅನುದಾನ ನೀಡಬೇಕು. ಕರ್ನಾಟಕ ಸರಕಾರದ 414 ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಮತ್ತು ಜೈನ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ ಎರಡು ವಿದ್ಯಾರ್ಥಿ ನಿಲಯಗಳನ್ನು ಮೀಸಲಿಡಬೇಕೆಂದು ಆಗ್ರಹಿಸಲಾಗುವುದು ಎಂದರು.
ಇಲ್ಲಿಯವರೆಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನ ಸಮಾಜಕ್ಕೆ ಕೊಡಬೇಕು ಹಾಗೂ ಇನ್ನು ನಿಗಮದಲ್ಲಿ ಜೈನ ನಿರ್ದೇಶಕರ ಆಯ್ಕೆ ಆಗಿಲ್ಲ. ತಕ್ಷಣ ಇಬ್ಬರು ಜೈನ ನಿರ್ದೇಶಕರನ್ನು ಆಯ್ಕೆ ಮಾಡಬೇಕೆಂದರು.
ಅಲ್ಪಸಂಖ್ಯಾತರ ವಿಭಾಗದಲ್ಲಿ 5% ಜೈನ ಸಮಾಜಕ್ಕೆ ಮೀಸಲಾತಿ ಇದೆ ಅದನ್ನು ಹೆಚ್ಚಿಸಿ 20% ಮಾಡಬೇಕು. ಪ್ರಾಚೀನ ಜೈನ ಬಸದಿ ಮತ್ತು ಬಸದಿಗಳ ಆಸ್ತಿಯ ಸಂರಕ್ಷಣೆಗಾಗಿ ಕಠೋರ ಕಾನೂನು ತರಬೇಕು ಮತ್ತು ಎಲ್ಲಾ ಪ್ರಾಚೀನ ಬಸದಿ ಮತ್ತು ಆಸ್ತಿಗಳ ಸರ್ವೇ ಮಾಡಿ ಅತಿಕ್ರಮಣ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಸಬೇಕೆಂದರು.
ಕರ್ನಾಟಕ ಸರಕಾರದಿಂದ ನೀಡಿರುವ ಶಿಕ್ಷಣ ಸಂಸ್ಥೆಗಳನ್ನು ಅಲ್ಪಸಂಖ್ಯಾತರ ಸಂಸ್ಥೆಯೆಂದು ನೀಡಿರುತ್ತಾರೆ. ಆ ಸಂಸ್ಥೆಗಳಲ್ಲಿ ಶೇಕಡಾ 50% ಕ್ಕಿಂತ ಕಡಿಮೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರುವ ಸಂಸ್ಥೆಗಳನ್ನು ಸಾಮಾನ್ಯ ಸಂಸ್ಥೆ ಎಂದು ನಿಯಮ ಮಾಡುವುದನ್ನು ಹಿಂಪಡೆಯುವುದು ಹಾಗೂ ಜೈನ ಸಮಾಜದವರು ಸಸ್ಯಹಾರಿಗಳಾಗಿರುವುದರಿಂದ ಜೈನ ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಮೊಟ್ಟೆ ವಿತರಣೆ ಮಾಡುವುದನ್ನು ನಿಲ್ಲಿಸುವುದು. ಇದಕ್ಕೆ ನಮ್ಮ ಸಮಾಜದಿಂದ ಸಂಪೂರ್ಣ ವಿರೋಧವಿದೆ ಎಂದರು.
ಅಭಯ ಅವಲಕ್ಕಿ, ವರ್ಧಮಾನ ಮಾರ್ಗನಕೊಪ್ಪ ಉಪಸ್ಥಿತರಿದ್ದರು.
7th December 2024
ಸಂಚಾರಿ ನಿಯಮಗಳ ಪಾಲನೆಯಿಂದ ಎಲ್ಲ ಸಂಚಾರಿಗಳು ಸುರಕ್ಷಿತ: ಜಿಲ್ಲಾಧಿಕಾರಿ ದಿವ್ಯ ಪ್ರಭು.
ಧಾರವಾಡ ಡಿಸೆಂಬರ 03: ರಸ್ತೆ ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸುವದರಿಂದ ಎಲ್ಲ ಸಂಚಾರಿಗಳು ಸುರಕ್ಷಿತವಾಗಿರುತ್ತಾರೆ. 2024 ರ ಜನೆವರಿಯಿಂದ ನವೆಂಬರವರಗೆ ಅವಳಿನಗರದಲ್ಲಿ 118 ವಾಹನ ಅಪಘಾತ ಪ್ರಕರಣಗಳಾಗಿದ್ದು, ಇದರಲ್ಲಿ 126 ಜನ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ ಆಯೋಜಿಸಿದ್ದ ಎಲ್.ಇ.ಡಿ ಸ್ಕ್ರೀನ್ ಹೊಂದಿರುವ ವಾಹನಗಳ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ರಸ್ತೆ ಸಾರ್ವಜನಿಕರಿಗೆ ಸೇರಿದ್ದು, ಸ್ವೆಚ್ಛಾಚಾರಿಗಳಾಗಿ ತಮಗೆ ತಿಳಿದಂತೆ ರಸ್ತೆಗಳಲ್ಲಿ ವಾಹನ ಓಡಿಸಬಾರದು. ಇದರಿಂದ ಸವಾರನ ಜೊತೆಗೆ ಸಂಚರಿಸುವವರಿಗೆ ಮತ್ತು ಇತರ ಸಹ ಪ್ರಯಾಣಿಕರ ಪ್ರಾಣಕ್ಕೂ ತೊಂದರೆ ಆಗುತ್ತದೆ. ರಸ್ತೆ ಸಂಚಾರ ನಿಯಮಗಳನ್ನು ಗೌರವಿಸಿ, ಪ್ರತಿಯೊಬ್ಬರು ಪಾಲಿಸಬೇಕೆಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ರಸ್ತೆ ಸಂಚಾರ ನಿಯಮಗಳ ಕುರಿತು ಸಾರ್ವಜನಿಕರ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ ಆಯೋಜಿಸಲಾಗಿದೆ. ಕರಪತ್ರ, ಪೊಸ್ಟರ್‍ಗಳ ಮೂಲಕ ಸಂಚಾರಿ ನಿಯಮಗಳ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಯುವಕ, ಯುವತಿಯರು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಬೇಕು. ವಾಹನ ಓಡಿಸುವಾಗ ತಲೆಗೆ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕು. ಸೂಚಿತ ವೇಗದ ಮೀತಿಯನ್ನು ಪಾಲಿಸಬೇಕು. ರಸ್ತೆ ಬದಿಯಲ್ಲಿ ಅಳವಡಿಸಿರುವ ಸೂಚನಾ ಫಲಕಗಳನ್ನು ಗಮನಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಅಪರ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ, ಉಪ ಪೊಲೀಸ ಆಯುಕ್ತ ರವೀಶ ಸಿ.ಆರ್. ಅವರು ಮಾತನಾಡಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಇದ್ದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ರಸ್ತೆ ಸುರಕ್ಷತೆ ಪಾಲನೆ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಸಿಬ್ಬಂದಿ ಜಿ.ವಿ.ದಿನಮನಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
**