15th November 2024
ಸಾಹಿತ್ಯ, ರಂಗಭೂಮಿಗೆ ಬಾಳಾಚಾರ್ ಅವರ ಕೊಡುಗೆ ಅಪಾರ
ಧಾರವಾಡ ನವೆಂಬರ 15: ನಿನ್ನೆ (ನ.14) ರಂಗಾಯಣದ ಪಂ. ಬಸವರಾಜ ರಾಜುಗುರು ಬಯಲು ರಂಗಮಂದಿರದಲ್ಲಿ ಧಾರವಾಡ ರಂಗಾಯಣ ಹಾಗೂ ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ ಸಹಯೋಗದೊಂದಿಗೆ ಆಧುನಿಕ ಕನ್ನಡ ರಂಗಭೂಮಿ ದಿನದ ಅಂಗವಾಗಿ ಆಯೋಜಿಸಿದ್ದ 3 ದಿನಗಳ ನಾಟಕೋತ್ಸವವನ್ನು ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ನ ಅಧ್ಯಕ್ಷ ಬಾಬುರಾವ್ ಸಕ್ಕರಿ ಅವರು ಉದ್ಘಾಟಿಸಿ, ಸಕ್ಕರಿ ಬಾಳಾಚಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು.
ಉತ್ತರ ಕರ್ನಾಟಕದಲ್ಲಿ ಮರಾಠಿ ನಾಟಕಗಳು ಹೆಚ್ಚು ಪ್ರಚಲಿತವಾಗಿದ್ದನ್ನು ಕಂಡು ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕನ್ನಡದಲ್ಲಿ ನಾಟಕಗಳನ್ನು ಸಿದ್ಧಪಡಿಸಿ ಪ್ರದರ್ಶನ ಮಾಡಿ. ನಾಟಕ ಕಂಪನಿಯನ್ನು ಕಟ್ಟುವಲ್ಲಿ ಸಕ್ಕರಿ ಬಾಳಾಚಾರ್ಯರು ಮೊದಲಿಗರು. ಕನ್ನಡದಲ್ಲಿ ಹಲವಾರು ಕಾವ್ಯಗಳನ್ನು, ಅನುವಾದ ಹಾಗೂ ಇತರೆ ಕೃತಿಗಳನ್ನು ರಚಿಸಿದರು. ಕೀರ್ತನೆಗಳನ್ನು ರಚಿಸಿ ತಾವೇ ಹಾಡುತ್ತಿದ್ದರು. ಕನ್ನಡದಲ್ಲಿ ಉಷಾಹರಣ ಎಂಬ ಸ್ವತಂತ್ರ ನಾಟಕವನ್ನು ಪ್ರಥಮ ಬಾರಿಗೆ ರಚಿಸಿದ ಕೀರ್ತಿ ಅವರದು. ಯಾವುದೇ ರೀತಿ ಗುರುತಿಸಿಕೊಳ್ಳದೇ 65 ಕ್ಕಿಂತ ಹೆಚ್ಚು ಪುಸ್ತಕಗಳನ್ನು ರಚಿಸುವ ಮೂಲಕ ಆಧುನಿಕ ಕನ್ನಡ ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಸಾಹಿತ್ಯ, ಕೃತಿ ನುಡಿಗಳು ರಂಗಭೂಮಿಗೆ ಪೂರಕವಾಗಿವೆ. 1918 ರಲ್ಲಿ ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಬಾಳಾಚಾರ್ಯ ಅವರ ಸಹಕಾರ ಪ್ರಮುಖವಾಗಿದೆ ಎಂದು ಶಾಂತಕವಿಗಳ ಬದುಕು ಬರಹ ಕುರಿತು ಉಪನ್ಯಾಸ ನೀಡಿದ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ಡಾ. ಗುರುನಾಥ ಬಡಿಗೇರ ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ರಾಜು ತಾಳಿಕೋಟೆ ಅವರು ರಂಗಾಯಣವು ಸಕ್ಕರಿ ಬಾಳಾಚಾರ್ ಅವರ ಹೆಸರಿನಲ್ಲಿ ಮೂರು ದಿನದ ನಾಟಕೋತ್ಸವ ಆಯೋಜಿಸುವ ಮೂಲಕ ರಂಗಾಸಕ್ತರಿಗೆ ಮನರಂಜನೆಯನ್ನು ಉಣ ಬಡಿಸುತ್ತದೆ. ಆದ್ದರಿಂದ ಎಲ್ಲ ಸಾಹಿತಿಗಳು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಂಗಭೂಮಿ ಬೆಳವಣಿಗೆ ಸಹಕಾರ ನೀಡಬೇಕು ಎಂದರು.
ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ವೀ ಹುಡೇದ, ಸ್ವಾಗತಿಸಿದರು. ಅನಿಲ ಮೇತ್ರಿ, ಅನುರಾಗ ಸಾಂಸ್ಕøತಿಕ ಬಳಗ ತಂಡದವರು ರಂಗ ಸಂಗೀತವನ್ನು ಪ್ರಸ್ತುತ ಪಡಿಸಿದರು. ಧಾರವಾಡ ಗೊಂಬೆ ಮನೆ ಹಾಗೂ ಆಟ ಮಾಟತಂಡ ಸಹಕಾರ ನೀಡಿದರು. ಆರತಿ ದೇವಶಿಕಾಮಣಿ ಅವರು ನಿರೂಪಿಸಿದರು. ನಂತರ ಜೋಗಿ ರಚಿಸಿ, ಡಾ.ಪ್ರಕಾಶ ಗರುಡ ನಿರ್ದೇಶಿಸಿದ ವಿಶ್ವಾಮಿತ್ರ ಮೇನಕೆ ಡಾನ್ಸ ಮಾಡೋದು ಏನಕೆ ನಾಟಕವನ್ನು ಗೊಂಬೆ ಮನೆ ತಂಡ ಪ್ರಸ್ತುತ ಪಡಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಗಾಯತ್ರಿ ಮಹಾದೇವ, ರಂಗ ಸಮಾಜ ಸದಸ್ಯ ಮಹಾಂತೇಶ ಗಜೇಂದ್ರಗಡ, ಸಕ್ಕರಿ ಬಾಳಾಚಾರ್(ಶಾಂತಕವಿ) ಟ್ರಸ್ಟ್ನ ಕಾರ್ಯದರ್ಶಿ ಹನುಮೇಶ ಸಕ್ಕರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
**
ಶ್ರೀ ದುರ್ಗಾ ಫಿಲ್ಮ್ಸ್ ಬ್ಯಾನರ್ ನಲ್ಲಿ "ನವಿಲುಗೆಜ್ಜೆ " ಎಂಬ ಕಿರು ಚಿತ್ರದ ಟೈಟಲ್ ಬಿಡುಗಡೆ ಅಂಬೆಡ್ಕರ್ ಉದ್ಯಾನವನದಲ್ಲಾಯಿತು...
ದಾಲ್ಮಿಯ ಸಿಮೆಂಟ್ ಕಾರ್ಖಾನೆ ವತಿಯಿಂದ 70 ಹೊಲಿಗೆ ಯಂತ್ರಗಳ ವಿತರಣೆ ಹಾಗೂ ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟ, ಕಾಮನಕಟ್ಟಿಗೆ 4 ಲಕ್ಷ ರೂಪಾಯಿಗಳ ಚೆಕ್ ವಿತರಣೆ