3rd April 2025
ಮಾನವನ ಜ್ಞಾನಕ್ಕೆ ಮಹತ್ವ ನೀಡಿ: ಬರಗೂರ ರಾಮಚಂದ್ರಪ್ಪ
ಬೆಳಗಾವಿ: ಇತ್ತೀಚೆಗೆ ತಂತ್ರಜ್ಞಾನವನ್ನು ಅತಿಯಾಗಿ ಬಳಕೆ ಮಾಡುತ್ತಿರುವುದರ ಕುರಿತು ವಿಶೇಷ ಕಾಳಜಿವಹಿಸುವ ಅವಶ್ಯಕತೆಯಿದೆ. ತಂತ್ರಜ್ಞಾನವು ಸಾಂಸ್ಕೃತಿಕ ಮತ್ತು ಸಾಹಿತ್ಯ ವಲಯದ ಸೃಜನಶೀಲತೆಗೆ ಪೂರಕವಲ್ಲ. ಆದ್ದರಿಂದ ತಂತ್ರಜ್ಞಾನದ ಬದಲಾಗಿ ಮಾನವ ಸೃಜನಶೀಲ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಾಹಿತಿ ನಾಡೋಜ ಬರಗೂರ ರಾಮಚಂದ್ರಪ್ಪ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಮರಾಠಿ ವಿಭಾಗಗಳ ಸಹಯೋಗದಲ್ಲಿ ಗುರುವಾರ ಏ.3ರಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಹೊಸ ಸಹಸ್ರಮಾನದ ಧ್ವನಿಗಳು: ಸಮಾಕಾಲೀನ ಭಾರತದಲ್ಲಿ ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ ಕುರಿತಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ದಿನಮಾನದಲ್ಲಿ ತಂತ್ರಜ್ಞಾನ ಬಳಕೆ ಅತಿ ಅವಶ್ಯವಾಗಿದೆ. ಆದರೆ, ಕೆಲ ಬಾರಿ ತಂತ್ರಜ್ಞಾನದ ದಾಸರಾಗಿ ವರ್ತಿಸುತ್ತಿರುವುದು ಕೂಡ ತಪ್ಪು. ಕೃತಕ ಬುದ್ಧಿಮತ್ತೆ ಮತ್ತು ಇತರೆ ಮಾಹಿತಿ ತಂತ್ರಜ್ಞಾನ ಉಪಕರಣಗಳೂ ನೀಡುವ ಮಾಹಿತಿಗಳು ಅನೇಕ ಎಡವಟ್ಟುಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ತಂತ್ರಜ್ಞಾನ ನೀಡುವ ಮಾಹಿತಿ ಅಂತಿಮ ಎಂದು ಭಾವಿಸಬಾರದು. ಆದ್ದರಿಂದ ತಂತ್ರಜ್ಞಾನದ ಬಳಕೆಯ ಔಚಿತ್ಯ ಮತ್ತು ವಿವೇಕ ಈ ಎರಡು ಸಂಗತಿಗಳ ಬಗ್ಗೆ ಕಾಳಜಿ ನೀಡಬೇಕಾಗಿದೆ. ಇತ್ತೀಚಿನ ಸಾಹಿತ್ಯ ವಿಚಾರ ಸಂಕಿರಣದಲ್ಲಿ ತಂತ್ರಜ್ಞಾನ ಬಳಕೆ ಕುರಿತಾಗಿ ಮುಕ್ತವಾಗಿ ಚರ್ಚೆ, ಅಧ್ಯಯನ, ವಿಶ್ಲೇಷಣೆ ಜರುಗಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.
ಸಮಕಾಲೀನ ಸಾಹಿತ್ಯ ಎಂದ ಮಾತ್ರಕ್ಕೆ ಇಲ್ಲಿ ಆಧುನಿಕ ಮಾತ್ರ ಎಂಬ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. ಗತಕಾಲದ ಚಿಂತನೆ, ಸಂಪ್ರದಾಯ ಮತ್ತು ಪರಂಪರೆಗಳ ಮೇಲೆಯೆ ವರ್ತಮಾನದ ಚಿಂತನೆ ರೂಪಿತವಾಗಿರುತ್ತದೆ. 20ನೇ ಶತಮಾನ ಕೈಗಾರಿಕೀಕರಣ ಒಳಗೊಂಡಿದ್ದರೆ, 21ನೇ ಶತಮಾನ ಜಾಗತೀಕರಣದಿಂದ ಕೂಡಿದೆ. ಕೈಗಾರಿಕೀಕರಣದಿಂದ ಜಾತಿ-ಭೇದ-ಅಸ್ಪೃಶ್ಯತೆ ಸ್ವಲ್ಪ ಮರೆಯಾಗಿತ್ತು. ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸುವ ಮೂಲಕ ಮೇಲು ಕೀಳೂ ಭಾವ ದೂರವಾಗಿತ್ತು. ಆದರೆ ಈ ಜಾಗತೀಕರಣದ ಕಾಲದಲ್ಲಿ ಪೌರೋಹಿತ್ಯ ಮತ್ತು ಬಂಡವಾಳಶಾಹಿ ವ್ಯವಸ್ಥೆ ಮತ್ತೆ ಮೆಲ್ಪಂಕ್ತಿಗೆ ಬರುತ್ತಿದೆ. ಇದರ ಜೊತೆಗೆ ಇತ್ತೀಚಿಗೆ ಸಂವಾದದ ಬದಲು ರಾಜಕೀಯ ಪ್ರೇರಿತ ಭಾವೋನ್ಮಾದ ಹೆಚ್ಚಾಗುತ್ತಿರುವುದು ವಿ಼ಷಾದನೀಯ ಸಂಗತಿ ಎಂದರು.
ಕೆಲವರು ಸಾಹಿತ್ಯ ಎಂದರೆ ಶಬ್ದ, ಅಕ್ಷರ ಪ್ರಾಸಗಳ ಸತ್ವ ಎಂದು ತಿಳಿದು, ಹೊಸ ಪ್ರಯೋಗದ ಸಾಹಿತ್ಯಕ್ಕೆ ಸತ್ವವಿಲ್ಲ ಎಂದು ಆರೋಪ ಕೂಡ ಮಾಡುತ್ತಾರೆ.
ನಾನು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾದ ಸಂದರ್ಭದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಕುರಿತು ಅಧ್ಯಯನಕ್ಕೆ ಮಹತ್ವ ನೀಡಿದೆ. ಆಗ ಕೆಲವರು ಅಣಕವಾಡಿದರು. ಆ ಅಧ್ಯಯನದಿಂದ ಅನೇಕ ಪುಸ್ತಕಗಳು ಹೊರಬಂದು ಸಮಾಜದಲ್ಲಿ ಹೊಸ ಸಂವೇದನೆ ಹುಟ್ಟುಹಾಕಿತ್ತು. ಆಗ ಅಲೆಮಾರಿ ಸಮುದಾಯದ ಕಡೆ ಸಮಾಜದ ಚಿತ್ತ ಹರಿಯಿತು. 2011ರ ಜನಗಣತಿ ಪ್ರಕಾರ ಒಬ್ಬ ವ್ಯಕ್ತಿಯನ್ನು ಮಾತ್ರ ಹೊಂದಿರುವ ಕುಲಂಕುಲು ಜಾತಿಯಿದೆ. ಮಾನಬಸ್ತಿ ಜಾತಿಯಲ್ಲಿ ಐದು ಜನ, ಬನ್ನಿ ಹಂದಿ ಎಂಬ ಜಾತಿಯಲ್ಲಿ ಹನ್ನೊಂದು ಜನ ಮಾತ್ರ ಇದ್ದಾರೆ. ಹತ್ತು ಲಕ್ಷಕ್ಕೂ ಅಧಿಕ ಜನರು ಜಾತಿ ರಹಿತರೂ ಎಂಬುದು ತಿಳಿದು ಬರುತ್ತದೆ. ಆದಿವಾಸಿ, ಅಲೆಮಾರಿ ಮತ್ತು ಬುಡಕಟ್ಟು ಸಮದಾಯಕ್ಕೆ ಸೇರಿದ ಒಟ್ಟೂ 11 ಕೋಟಿ ಜನರಿದ್ದಾರೆ. ಸಮಾಜದ ಕೇಂದ್ರದಿಂದ ಅಂಚಿನಲ್ಲಿರುವ ಅದೆಷ್ಟೋ ಸಮುದಾಯಗಳನ್ನು ಮುಖ್ಯವಾಹಿನಿಗೆ ತಂದು ಅವರಿಗೆ ಸಾಮಾಜಿಕ ನ್ಯಾಯ ಕೊಡಿಸುವುದು ಸಾಹಿತ್ಯದ ಬಹು ದೊಡ್ಡ ಜವಾಬ್ದಾರಿ ಎಂದರು. ಅಸಂಘಟಿತ ಮತ್ತು ಧ್ವನಿರಹಿತ ಜನಾಂಗದ ಕುರಿತಾದ ಸಾಹಿತ್ಯ ನಿರ್ಮಾಣ ಇಂದಿನ ಅವಶ್ಯಕತೆಯಾಗಿದೆ. ಆದ್ದರಿಂದ ಯುವ ಬರಹಗಾರರು ಅಸಂಘಟಿತ ವಲಯದ ಕುರಿತಾದ ಅನುಭವಗಳ ಸಾಹಿತ್ಯ ಹೊರತರುವಲ್ಲಿ ಆಸಕ್ತಿ ವಹಿಸಬೇಕು ಎಂದರು.
ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ವಿಭಿನ್ನ ಸಾಮಾಜಿಕ ಜಗತ್ತುಗಳೊಂದಿಗೆ ಅನುಸಂಧಾನ ವಿಷಯದ ಕುರಿತಾಗಿ ಮಾತನಾಡಿ, ಪರ ಧರ್ಮ ಮತ್ತು ಪರ ಚಿಂತನೆಗಳಿಗೆ ಗೌರವಿಸುವುದು ನಿಜವಾದ ಸಂಸ್ಕೃತಿಯಾಗಿದೆ. ನಗರ ಮತ್ತು ಜಾಗತೀಕರಣದ ನಡುವೆಯೂ ಅಸ್ಪೃಶ್ಯತೆ ಉಳಿದಿದೆ. ಈ ಕುರಿತಾಗಿ ಅನೇಕ ಹೊಸ ಹೊಸ ಬರಹಗಾರರು ಮಾರ್ಮಿಕವಾಗಿ ತಮ್ಮ ಕೃತಿಗಳನ್ನು ರಚಿಸುತ್ತಿದ್ದಾರೆ. ಯುವ ಬರಹಗಾರರು ಹೊಸ ಅನುಭವ, ನಿರೂಪಣೆ, ಹೊಸ ಸಾಧ್ಯತೆಗಳನ್ನು ಅನುಲಕ್ಷಿಸಿ ಸಾಹಿತ್ಯ ರಚಿಸಬೇಕು ಎಂದು ಸಲಹೆ ನೀಡಿದರು.
ಸಾಹಿತ್ಯ ಕೇವಲ ಮನರಂಜನೆಯ ವಸ್ತುವಲ್ಲ; ಸಮಾಜದ ವಾಸ್ತವತೆ ಮತ್ತು ಅಂಕು ಡೊಂಕುಗಳನ್ನು ತಿದ್ದುವ ಸಾಧನ ಕೂಡ ಹೌದು. ಸಾಹಿತ್ಯ ತಕ್ಷಣಕ್ಕೆ ಸಮಾಜದಲ್ಲಿನ ತಪ್ಪುಗಳನ್ನು ತಿದ್ದಲಾರದು. ಹಾಗಂತ ಹೇಳಿ ಸಮಾಜದಲ್ಲಿನ ತಪ್ಪುಗಳನ್ನು ಖಂಡಿಸುವ ಮನೋಭಾವವನ್ನು ಕೂಡ ತೊರೆಯುವುದು ಸೂಕ್ತವಲ್ಲ. ಸಾಹಿತ್ಯವು ಸಮುದಾಯದಲ್ಲಿನ ವಿವೇಕವನ್ನು ಜಾಗೃತಿಗೊಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಸಂತೋಷ ಕಾಮಗೌಡ ಮಾತನಾಡಿ, ಸಾಹಿತ್ಯವು ಓದುಗರಿಗೆ ಕೇವಲ ಸಂತೋಷ ನೆಮ್ಮದಿ ನೀಡುವುದು ಮಾತ್ರವಲ್ಲ. ಆದರ ಆಚೆಗೂ ಸಮಾಜವನ್ನು ತಿದ್ದುವ, ವಿಚಾರಧಾರೆಗಳನ್ನು ಬಿತ್ತುವುದಾಗಿದೆ. ಸಮಾಜದಲ್ಲಿನ ವಾಸ್ತವ ಸಂಗತಿಗಳನ್ನು ಅರಿತು, ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮುಖ್ಯ ಆಶಯ ಸಾಹಿತ್ಯ ಹೊಂದಿದೆ. ಜಗತ್ತಿನ ಬದಲಾವಣೆಯ ಕಣ್ಣು ತೆರೆಸಿದುದು ಸಾಹಿತ್ಯ ಎಂದರು.
ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸಾಹಿತ್ಯ ಹಿಂದಿನ ಸಾಹಿತ್ಯಕ್ಕಿಂತ ಹೇಗೆ ಬದಲಾವಣೆ ಹೊಂದಿದೆ ಮತ್ತು ಭಿನ್ನವಾಗಿದೆ, ಜೊತೆಗೆ ಅದರ ಹೊರಳು ದಾರಿಯನ್ನು ಗಮನಿಸುವುದು ಮತ್ತು ಸಮಕಾಲೀನ ಸಾಹಿತ್ಯದ ಮೇಲೆ ಯಾವೆಲ್ಲ ಅಂಶಗಳು ಪ್ರಭಾವ ಬೀರಿವೆ ಎಂಬುದನ್ನು ಗುರುತಿಸುವುದು ಇಂದಿನ ತುರ್ತಾಗಿದೆ. ಭಾರತೀಯ ಸಾಹಿತ್ಯವೆಂದರೆ ಯಾವುದೋ ಒಂದು ಭಾಷೆಗೆ ಸೀಮಿತವಾಗಿಲ್ಲ. ಆದ್ದರಿಂದ ಈ ವಿಚಾರ ಸಂಕಿರಣವನ್ನು ಕನ್ನಡ, ಮರಾಠಿ, ಇಂಗ್ಲೀಷ್ ಮತ್ತು ಹಿಂದಿ ಈ ನಾಲ್ಕು ಭಾಷೆಯ ಸಾಹಿತ್ಯದಲ್ಲಿನ ಸಮಕಾಲೀನ ಬೆಳವಣಿಗೆಗಳನ್ನು ಚರ್ಚಿಸಲು ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು, ವಿವಿಧ ಕಾಲೇಜಿನ ಅಧ್ಯಾಪಕ ವೃಂದ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದರು.
ಶಾಂಭವಿ ಥೋರ್ಲಿ ನಿರೂಪಿಸಿದರು. ಅನನ್ಯ ನಾಯಕ ಸ್ವಾಗತಿಸಿದರು. ಉಪನ್ಯಾಸಕಿ ಲಾವಣ್ಯ ಗುಂಜಾಳ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಗ್ಲೋರಿಯಾ ಮತ್ತು ಸಂಗಡಿಗರು ಸ್ವಾಗತ ಗೀತೆ ಪ್ರಸ್ತುತ ಪಡಿಸಿದರು. ಸೇಜಲ್ ಮಗದುಮ್ ವಂದಿಸಿದರು.
ಗ್ಯಾರಂಟಿ ಯೋಜನೆ ಪ್ರಗತಿಯ ಕಿರುಹೊತ್ತಿಗೆ ಬಿಡುಗಡೆ ಜಿಲ್ಲೆಯ 4 ಲಕ್ಷ ಕುಟುಂಬಗಳಿಗೆ ಅನುಕೂಲ-ಸಚಿವ ತಿಮ್ಮಾಪೂರ