

ವೀರಶೈವ ಮಠಗಳು ಧರ್ಮವನ್ನು ಉಳಿಸುವ ಕೆಲಸವನ್ನು ಮಾಡುತ್ತಿವೆ: ಸಂಸದ ಜಗದೀಶ್ ಶೆಟ್ಟರ್
29th October 2024
ತುಂಗಾಕಿರಣ ಸುದ್ದಿ
ಕುಷ್ಟಗಿ: ನಾಡಿನಾದ್ಯಂತ ಇರುವ ವೀರಶೈವ ಮಠಗಳು ಧರ್ಮ ಜಾಗೃತಿಯನ್ನು ಮಾಡುವ ಮೂಲಕ ಧರ್ಮವನ್ನು ಉಳಿಸುವ ಕೆಲಸವನ್ನು ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ್ ಅವರು ಹೇಳಿದರು.
ತಾಲೂಕಿನ ಚಳಗೇರಾ ಗ್ರಾಮದಲ್ಲಿ ಲಿಂ. ವಿರುಪಾಕ್ಷಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆಯ ದಶಮಾನೋತ್ಸವದ ಅಂಗವಾಗಿ ರಂಭಾಪುರಿ ಶ್ರೀಗಳಾದ ಡಾ. ವೀರಸೋಮೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಇಂದು ನಡೆದ ಲಿಂಗಾಂಗ ಸಾಮರಸ್ಯ ಧರ್ಮಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಷ್ಟಗಿ ತಾಲೂಕಿನಲ್ಲಿರುವ ಚಳಗೇರಾ ಮಠವು ಅನ್ನದಾಸೋಹದ ಜೊತೆಗೆ ಶಿಕ್ಷಣವನ್ನು ನೀಡುವ ಮೂಲಕ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವದು ಶ್ಲಾಘನೀಯವಾಗಿದೆ ಎಂದರು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಮಾತಿನಂತೆ ರಂಭಾಪುರಿ ಶ್ರೀಗಳು ನಾಡಿನ ತುಂಬೆಲ್ಲಾ ಪ್ರವಾಸ ಮಾಡಿ ಧರ್ಮ ಜಾಗೃತಿ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ಶಾಂತಿ ನೆಲೆಸಬೇಕು ಎಂಬ ಉದ್ದೇಶದಿಂದ ಅನೇಕ ದೇಶಗಳಿಗೆ ಪ್ರವಾಸವನ್ನು ಮಾಡುವ ಮೂಲಕ ಅಲ್ಲಿಯ ಅಧ್ಯಕ್ಷರನ್ನು ಭೇಟಿ ಮಾಡಿ, ಯುದ್ಧ ಮಾಡುವ ಬದಲಿಗೆ ಶಾಂತಿ ನೆಲೆಸುವ ಕಾರ್ಯವನ್ನು ಮಾಡಬೇಕು ಎಂದು ಹೇಳುವ ಮೂಲಕ ಶಾಂತಿ ನೆಲೆಸುವಂತೆ ಮಾಡುತ್ತಿದಾರೆ ಎಂದು ಹೇಳಿದರು.
ಕೊಪ್ಪಳ ಲೋಕಸಭಾ ಸದಸ್ಯ ರಾಜಶೇಖರ ಹಿಟ್ನಾಳ ಮಾತನಾಡಿ, ಸುಮಾರು ಐದು ಸಾವಿರ ವರ್ಷಗಲಿಂದಲೂ ವೀರಶೈವ ಮಠಗಳು ಸಂಸ್ಕಾರ ಸಂಸ್ಕೃತಿಯನ್ನು ಕಲಿಸುವ ಮೂಲಕ ಶಿಕ್ಷಣ. ವಸತಿ, ಅನ್ನದಾಸೋಹ ಹಾಗೂ ಧರ್ಮ ಜಾಗೃತಿ ಕಾರ್ಯವನ್ನು ಮಾಡುತ್ತಾ ಬಂದಿರುತ್ತವೆ ಇಂತಹ ಮಠ ಮಂದಿರಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಬೆಳೆಸುವ ಕೆಲಸವನ್ನು ಮಾಡಬೇಕು. ಈ ಚಳಗೇರಾ ಮಠವು ವಸತಿ ನಿಲಯದ ಸ್ಥಾಪನೆಗೆ ಹೆಜ್ಜೆ ಇಟ್ಟಿದ್ದು ಶ್ಲಾಘನೀಯ ಕಾರ್ಯವಾಗಿದೆ ಈ ಕಟ್ಟಡ ಕಾರ್ಯಕ್ಕೆ ಅನುದಾನದಲ್ಲಿ ನಾನು ಈ ವರ್ಷ ಹತ್ತು ಲಕ್ಷ ಹಾಗೂ ಮುಂದಿನ ವರ್ಷ ಹತ್ತು ಲಕ್ಷ ನೀಡುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ತ್ರಿವಿಧ ದಾಸೋಹ ನೀಡುವಲ್ಲಿ ವೀರಶೈವ ಮಠಗಳು ಬಹಳಷ್ಟು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದರು. ಮಾಜಿ ಶಾಸಕ ಪರಣ್ಣ ಮನವಳ್ಳಿ ಮಾತನಾಡಿ ವೀರಶೈವ ಮಠಗಳು ಮಾಡುವ ಕಾರ್ಯವನ್ನು ಯಾವ ಮಠಗಳು ಮಾಡುತ್ತಿಲ್ಲ. ಮಠ ಮಂದಿರಗಳು ಬೆಳವಣಿಗೆ ಆಗಬೇಕು ಅವುಗಳ ಆಶ್ರಯ ಮತ್ತು ಸಹಕಾರದಲ್ಲಿ ನಾವು ಬೆಳೆಯಬೇಕು ಎಂದರು. ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ ನಮ್ಮ ಭಾರತ ದೇಶವು ತ್ಯಾಗದ ಸಂಕೇತವಾಗಿದ್ದು ಇಲ್ಲಿಯ ಮಠಗಳಲ್ಲಿ ಅನ್ನ ದಾಸೋಹ ಶಿಕ್ಷಣ ದಾಸೋಹ ಇದ್ದು, ಮಕ್ಕಳು ಇಲ್ಲಿ ಶಾಲೆ ಕಲಿತು ಉತ್ತಮ ಜೀವನ ಕಟ್ಟಿಕೊಳ್ಳ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಹೆಚ್. ಪಾಟೀಲ, ಮಾಜಿ ಶಾಸಕ ಹಾಗೂ ಕಾಡಾ ಅಧ್ಯಕ್ಷರಾದ ಹಸನಸಾಬ ದೋಟಿಹಾಳ, ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ಹಾಗೂ ಎಸ್ ಆರ್ ನವಲಿ ಹಿರೇಮಠ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಪೂಜ್ಯರಾದ ವಿಮಲರೇಣುಕ ಮುಕ್ತಿಮುನಿ, ವೀರಸಂಗಮೇಶ್ವರ ಶಿವಾಚಾರ್ಯರು, ವೀರಭದ್ರಸ್ವಾಮಿಗಳು, ಮಲ್ಲಿಕಾರ್ಜುನ ಸ್ವಾಮಿಗಳು, ವಾಮದೇವ ಸ್ವಾಮಿಗಳು, ಕರಿಬಸವ ಶಿವಾಚಾರ್ಯರು, ಚಂದ್ರಶೇಖರ ದೇವರು, ಶಿವಶಾಂತವೀರ ಸ್ವಾಮಿಗಳು ಸೇರಿದಂತೆ ಭಕ್ತಾಧಿಗಳು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಚನ್ನಯ್ಯಸ್ವಾಮಿ ನಡೆಯಿಸಿಕೊಟ್ಟರು.

ಕಂದಕೂರು ಗ್ರಾ.ಪಂ. ಅವಿರೋಧವಾಗಿ ನೂತನ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ : ತಹಸೀಲ್ದಾರ ಅಶೋಕ ಶಿಗ್ಗಾವಿ ಘೋಷಣೆ
26th September 2024
ತುಂಗಾಕಿರಣ ಸುದ್ದಿ
ಕುಷ್ಟಗಿ : ತಾಲೂಕಿನ ಕಂದಕೂರು ಗ್ರಾಮ ಪಂಚಾಯತಿಗೆ ನೂತನವಾಗಿ ಬುಧುವಾರ ಅಧ್ಯಕ್ಷರಾಗಿ ದುರಗಮ್ಮ ಸತ್ಯಪ್ಪ ಹಾದಿಮನಿ, ಉಪಾಧ್ಯಕ್ಷರಾಗಿ ಜಯಮ್ಮ ಬಸವರಾಜ ಉಪ್ಪಲದಿನ್ನಿ ಅವಿರೋಧವಾಗಿ ಬುಧುವಾರ ಆಯ್ಕೆಯಾಗಿದ್ದಾರೆ.
ಕಂದಕೂರು ಗ್ರಾ.ಪಂ. ಅಧ್ಯಕ್ಷ ಸ್ಥಾನವು ಪರಿಶೀಷ್ಟ ಜಾತಿ (ಎಸ್ ಸಿ) ಮಿಸಲಾತಿಯಿದ್ದು ದುರಗಮ್ಮ ಸತ್ಯಪ್ಪ ಹಾದಿಮನಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಅದರಂತೆ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಸ್ಥಾನಕ್ಕೆ ಇದ್ದು ಜಯಮ್ಮ ಬಸವರಾಜ ಉಪಲದಿನ್ನಿ ಇವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ತಹಸೀಲ್ದಾರ ಅಶೋಕ ಶಿಗ್ಗಾವಿ ಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಒಟ್ಟು 16 ಜನ ಸದಸ್ಯರಲ್ಲಿ 15 ಜನ ಸದಸ್ಯರು ಹಾಜರಿದ್ದರು ಒಬ್ಬ ಸದಸ್ಯರು ಗೈರಾಜರಾಗಿದ್ದರು.
ಸಹಾಯಕ ಚುನಾವಣಾಧಿಕಾರಿಯಾಗಿ ಕಂದಾಯ ಇಲಾಖೆಯ ಅಜೀತ್, ಪಿಡಿಓ ರಮೇಶ ಕಾರ್ಯನಿರ್ವಹಿಸಿದರು.
ವಿಜಯೋತ್ಸವ ಆಚರಣೆ : ಕಂದಕೂರು ಗ್ರಾಮ ಪಂಚಾಯತಿಗೆ ನೂತನವಾಗಿ ಬುಧುವಾರ ಅಧ್ಯಕ್ಷರಾಗಿ ದುರಗಮ್ಮ ಸತ್ಯಪ್ಪ ಹಾದಿಮನಿ, ಉಪಾಧ್ಯಕ್ಷರಾಗಿ ಜಯಮ್ಮ ಬಸವರಾಜ ಉಪ್ಪಲದಿನ್ನಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಗ್ರಾಪಂ ಕಚೇರಿಯ ಹತ್ತಿರ ಬಿಜೆಪಿ ಪಕ್ಷದ ಅಭಿಮಾನಿಗಳು ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು.
ಇದೇ ವೇಳೆ ಮುಖಂಡರಾದ ಕಂದಕೂರಪ್ಪ ವಾಲ್ಮೀಕಿ, ಚಂದ್ರಹಾಸ ಬಾವಿಕಟ್ಟಿ, ಆಂಜನೇಯ ಹಾದಿಮನಿ, ಬಸವರಾಜ ಉಪಲದಿನ್ನಿ, ಶಿವಪುತ್ರಪ್ಪ, ಮಾರುತಿ, ಶರಣಪ್ಪ ಉಪ್ಪಾರ ಭೀಮಣ್ಣ ಬಿಜಕಲ್, ಸಲಿಂಸಾಬ ಟೆಂಗುಂಟಿ, ಬಸವರಾಜ ದಳಪತಿ, ಹಾಗೂ ಗ್ರಾಮದ ಗುರು ಹಿರಿಯರು ಹಾಗೂ ಮುಖಂಡರು ಇದ್ದರು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ವರದಿಗಾರನ ಮೇಲೆ ಪೊಲೀಸ್ ಅಧಿಕಾರಿ ದೌರ್ಜನ್ಯ ಖಂಡಿಸಿ ಶಿಸ್ತುಕ್ರಮಕ್ಕೆ ರಾಜ್ಯ ಸರಕಾರಕ್ಕೆ ಮನವಿ
27th August 2024
ಕುಷ್ಟಗಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವರದಿಗಾರ
ನಿರಂಜನ ಅವರ ಮೇಲೆ ಸ್ಥಳೀಯ ಠಾಣೆಯ ಪೊಲೀಸ್ ಅಧಿಕಾರಿ ಅಶ್ವತ್‌ಗೌಡ ಅವರು ಕರ್ತವ್ಯಕ್ಕೆ
ಅಡ್ಡಿ ಪಡಿಸಿದ್ದಲ್ಲದೇ ನಿರಂಜನ ಅವರ ಮೊಬೈಲ್ ಕಿತ್ತುಕೊಂಡು ದೌರ್ಜನ್ಯ ಮೆರೆದಿದ್ದಾರೆ ಹಾಗೂ ಪತ್ರಕರ್ತನಿಗೆ ನಿನ್ನನ್ನು ಪೋಕೋ ಕಾಯ್ದೆಯಡಿ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದನ್ನು ಖಂಡಿಸಿ ಕರ್ನಾಟಕ ಕಾರ್ಯ ನಿರತ ಪತ್ರರ್ಕರ ಸಂಘ (ರಿ) ಬೆಂಗಳೂರು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ಘಟಕದ ಪದಾಧಿಕಾರಿಗಳಿಂದ ಕರ್ನಾಟಕ ಸರಕಾರ ಮಾನ್ಯ ಮುಖ್ಯಮಂತ್ರಿ ಸಿ.ಎಂ. ಸಿದ್ಧರಾಮಯ್ಯ ನವರಿಗೆ ಕುಷ್ಟಗಿ ತಹಶೀಲ್ದಾರ ಅಶೋಕ ಶಿಗ್ಗಾವಿ ಇವರ ಮುಖಾಂತರ ಮನವಿ ಪತ್ರ ಸಲ್ಲಿಸಲಾಗಿದೆ
ಪತ್ರರ್ಕರ ರವೇಂದ್ರ ಬಾಕಳೆ ಮಾತನಾಡಿ ತೀರ್ಥಹಳ್ಳಿ ವರದಿಗಾರ ನಿರಂಜನ ಅವರ ಮೇಲೆ ಪೊಲೀಸ್ ಅಧಿಕಾರಿ ಅಶ್ವತ್‌ಗೌಡ ಅವರು ದೌರ್ಜನ್ಯ ಮೆರೆದಿದ್ದಾರೆ ಆ ಅಧಿಕಾರಿಯ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಮತ್ತು ರಾಜ್ಯದಲ್ಲಿ ವೃತ್ತಿನಿರತ ಪತ್ರಕರ್ತರ ಮೇಲೆ ಪದೇ ಪದೇ ದೌರ್ಜನ್ಯ,
ದಬ್ಬಾಳಿಕೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದರಿಂದಾಗಿ ಪತ್ರಕರ್ತರ ರಕ್ಷಣೆ ನಡೆಯುತ್ತಿಲ್ಲ. ಸರ್ಕಾರವು ಪತ್ರಕರ್ತರ ಹಿತ ರಕ್ಷಣೆಗಾಗಿ ವಿಶೇಷ ಕಾಯ್ದೆ ಜಾರಿಮಾಡುವ ಜೊತೆಗೆ ಅವರ ಭದ್ರತೆಗೆ ಒತ್ತು ನೀಡಬೇಕು. ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಯ ಮೇಲೆ ಶಿಸ್ತುಕ್ರಮ ಕೈಗೊಳ್ಳುವುದು
ಸೇರಿದಂತೆ ಕರ್ತವ್ಯ ನಿರತ ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಘನತೆವೆತ್ತ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಗೃಹಮಂತ್ರಿಗಳಿಗೆ ಕುಷ್ಟಗಿ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಕುಷ್ಟಗಿ ವತಿಯಿಂದ ಆಗ್ರಹಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ಉಪಾಧ್ಯಕ್ಷ ಪವಾಡೆಪ್ಪ ಚೌಡ್ಕಿ, ಕ.ಕಾ.ನಿ.ಪ.ಸಂಘದ ಜಿಲ್ಲಾ ಕಾರ್ಯಕಾರಣಿ ಸದಸ್ಯ ರವೀಂದ್ರ ಬಾಕಳೆ, ಸಂಗಮೇಶ ಸಿಂಗಾಡಿ, ಕ.ಕಾ.ನಿ.ಪ.ಸಂಘ ಸಹ ಕಾರ್ಯದರ್ಶಿ ಶರಣಪ್ಪ ಲೈನದ್, ಕ.ಕಾ.ನಿ.ಪ.ಸಂಘದ ಖಜಾಂಚಿ ಅನೀಲಕುಮಾರ ಕಮ್ಮಾರ, ಕ.ಕಾ.ನಿ.ಪ.ಸಂಘದ ಕಾರ್ಯಕಾರಣಿ ಸದಸ್ಯರಾದ ಪರಶಿವಮೂರ್ತಿ ಮಾಟಲದಿನ್ನಿ, ಭೀಮಸೇನರಾವ್ ಕುಲಕರ್ಣಿ, ಭೀಮನಗೌಡ ಗೌಡ್ರ, ಮಾಜಿ ತಾಲೂಕು ಕ.ಸಾಪ. ಅಧ್ಯಕ್ಷ ಚಂದಪ್ಪ ಹಕ್ಕಿ, ಸಾಹಿತ್ಯ ಪರಿಷತ್ ಸದಸ್ಯ ಭರಮಪ್ಪ ಹಂಡೆಕಾರ ಸೇರಿದಂತೆ ಕ.ಕಾ.ನಿ.ಪ.ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.